ಬೆಂಗಳೂರು: ತಾವೂ ಮತ್ತೆ ಜೆಡಿಎಸ್ ಸೇರುತ್ತಾರೆ ಎಂಬ ವದಂತಿಗಳಿಗೆ ರಾಜ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಈ ಎಲ್ಲಾ ಸುದ್ದಿಗಳು ಕೇವಲ ‘ಊಹಾಪೋಹ’ ಎಂದು ತಳ್ಳಿಹಾಕಿದ್ದಾರೆ. ಇಂದು (ಏಪ್ರಿಲ್ 21, 2026) ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, “ಥೂ.. ಥೂ.. ಥೂ.. ಹಾಗೇನು ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿ. ನಾನು ಯಾಕೇ ಜೆಡಿಎಸ್‌ಗೆ ಹೋಗಲಿ?” ಎಂದು ಮರುಪ್ರಶ್ನೆ ಮಾಡಿದರು.ನಾನು ಈಗಾಗಲೇ ಜೆಡಿಎಸ್ ಪಕ್ಷ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಹೆಚ್ಚಿನ ಗೌರವ ಮತ್ತು ನಿರೀಕ್ಷೆಗೂ ಮೀರಿದ ಸ್ಥಾನಮಾನ ನೀಡಿದೆ. 2023 ರಲ್ಲಿ ನನಗೆ ನಾಲ್ಕು ಖಾತೆಗಳನ್ನು ನೀಡಲಾಗಿದೆ. ಪಕ್ಷ ನನಗೇನು ಕಡಿಮೆ ಮಾಡಿಲ್ಲ ಎಂದ ಮೇಲೆ ನಾನು ಯಾಕೆ ಪಕ್ಷ ತೊರೆಯಲಿ?” ಎಂದು ಅವರು ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಜೊತೆ ಗೌಪ್ಯ ಮೀಟಿಂಗ್ ಸುಳ್ಳು: ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ತಾವು ಗೌಪ್ಯ ಮಾತುಕತೆ ನಡೆಸಿದ್ದೀರಿ ಎಂಬ ಸುದ್ದಿಯನ್ನು ಅವರು ಕಡ್ಡಾಯವಾಗಿ ನಿರಾಕರಿಸಿದರು. “ನಾನು ಯಾರೊಂದಿಗೂ ರಹಸ್ಯವಾಗಿ ಮಾತನಾಡಿಲ್ಲ” ಎಂದು ಹೇಳಿದರು.
ಹಳೆಯ ನೆನಪುಗಳು: 2018 ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರೂ, ತಮ್ಮನ್ನು ಮಂತ್ರಿ ಮಾಡುವ ನಿರೀಕ್ಷೆ ಇರಲಿಲ್ಲ. ಆದರೆ ಆ ಸಂದರ್ಭದಲ್ಲಿಯೂ 5 ಖಾತೆಗಳನ್ನು ನೀಡಲಾಗಿತ್ತು. ಆ ಬಳಿಕ ಕಾಂಗ್ರೆಸ್ ಸರ್ಕಾರದಲ್ಲೂ ಉತ್ತಮ ಸ್ಥಾನ ದೊರೆತಿದೆ ಎಂದು ಜಮೀರ್ ನೆನಪಿಸಿಕೊಂಡರು.
ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಇತ್ತೀಚೆಗೆ ತೆಗೆದುಕೊಂಡ ಕೆಲವು ಶಿಸ್ತು ಕ್ರಮಗಳಿಂದಾಗಿ ಜಮೀರ್ ಅಹಮದ್ ಬೇಸತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಪಕ್ಷ ತೊರೆದು ತಮ್ಮ ಹಳೆಯ ಪಕ್ಷವಾದ ಜೆಡಿಎಸ್‌ಗೆ ಮರಳಲಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕುಮಾರಸ್ವಾಮಿ ಅವರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಈಗ ಸ್ವತಃ ಜಮೀರ್ ಅವರೇ ಎಲ್ಲ ವದಂತಿಗಳಿಗೂ ತೆರೆ ಎಳೆದಿದ್ದಾರೆ.

