“ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಬಲ ತುಂಬಿವೆ” ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಹಳಿಯಾಳದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ರೂ. 798 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಮಾವೇಶ ಕೇಂದ್ರದ ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.
“ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದ ಇತರೇ ಜಿಲ್ಲೆಗಳಿಗಿಂತ ಅತ್ಯಂತ ವಿಪುಲ ಅವಕಾಶಗಳಿದ್ದು ಇದಕ್ಕೆ ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯವಿದೆ. ಪ್ರವಾಸೋದ್ಯಮವು ರಾಜ್ಯಕ್ಕೆ ಆದಾಯ ತರುವ ಮೂಲವಾಗುವುದು ಮಾತ್ರವಲ್ಲದೆ ರಾಜ್ಯದ ಕಲೆ, ಸಂಸ್ಕೃತಿ, ಇತಿಹಾಸದ ಬಗ್ಗೆ ನಾಡಿನ ಜನರಲ್ಲಿ ಜ್ಞಾನವನ್ನು ಬೆಳೆಸುವ ಕ್ಷೇತ್ರವಾಗಿದೆ” ಎಂದರು.
“ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಅತಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ 100 ಸುಸಜ್ಜಿತ ಡಾರ್ಮಿಟರಿಗಳನ್ನು ನಿರ್ಮಿಸಲು ಹಣ ಮೀಸಲಿಡಲಾಗಿದೆ” ಎಂದು ಸಚಿವರು ಹೇಳಿದರು.
“ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪ್ರವಾಸೋದ್ಯಮ ಅಧ್ಯಯನ ಸಮಿತಿ ನೀಡಿರುವ ವರದಿಯನ್ನು ಸರ್ಕಾರವು ಒಪ್ಪಿಕೊಂಡಿದ್ದು, ಇದನ್ನು ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
“ಹಳಿಯಾಳ ಮತ್ತು ದಾಂಡೇಲಿ ಭಾಗದಲ್ಲಿ ಗಾರ್ಡನ್‌ಗಳನ್ನು ನಿರ್ಮಿಸಲು ಒಂದು ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದ್ದು, ಸಂಚಾರಿ ರಾಕ್ ಟೂರಿಸ್ಟ್ ಡೆಷ್ಠಿನೆಷನ್ ಅಭಿವೃದ್ಧಿಗಾಗಿ 50 ಲಕ್ಷ ನೀಡಲಾಗುವುದು, ಕ್ಯಾಸಲ್ ರಾಕ್ ನೇಚರ್ ಕ್ಯಾಂಪ್ ಅಭಿವೃದ್ಧಿಗೆ 50 ಲಕ್ಷ ರೂಪಾಯಿಗಳನ್ನು ನೀಡಡಲಾಗುವುದು” ಎಂದರು
ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, “ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳು ಅಭಿವೃದ್ಧಿ ಹೊಂದಿದರೆ ಉದ್ಯೋಗ ಸೃಷ್ಟಿಯಾಗಲಿದೆ ಜೊತೆಗೆ ಸರ್ಕಾರವು ಈ ಇಲಾಖೆಗಳಿಗೆ ಪ್ರಧಾನತೆ ನೀಡಬೇಕು, ನಿರುದ್ಯೋಗ ಮತ್ತು ಬೆಲೆಯೇರಿಕೆ ಸಮಸ್ಯೆಗಳಿಗೆ ಈ ಎರಡು ಕ್ಷೇತ್ರಗಳ ಅಭಿವೃದ್ಧಿಯು ಸೂಕ್ತ ಪರಿಹಾರ ನೀಡಲಿದೆ” ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಮಾತನಾಡಿ, “ಸಮಾವೇಶ ಕೇಂದ್ರವನ್ನು ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ 2 ಹಂತದಲ್ಲಿ ಸುಮಾರು ರೂ. 8 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಎಲ್ಲರೂ ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು” ಎಂದರು.
“ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶಗಳು, ಜಲಪಾತಗಳು, ಕಡಲತೀರಗಳು ಹಾಗೂ ದ್ವೀಪಗಳನ್ನು ಹೊಂದಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಅಪಾರ ಸಾಧ್ಯತೆಗಳಿವೆ. ಈ ಹಿನ್ನೆಲೆ ಮುರುಡೇಶ್ವರ, ಗೋಕರ್ಣ ಹಾಗೂ ಕಾರವಾರ ಕಡಲತೀರಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಟೆಂಡರ್‌ಗಳನ್ನು ಕರೆಯಲಾಗಿದೆ” ಎಂದು ಹೇಳಿದರು.

