ಬೆಂಗಳೂರು : ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಿ ವಿಭಾಗದ ಬೇಜವಾಬ್ದಾರಿತನಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಜೀವಂತ ವ್ಯಕ್ತಿಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ಘೋಷಿಸಿದ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಡಿ. ಮೆಹಬೂಬ್ ಬಾಷಾ ಎಂಬುವವರು ತಾವು ಜೀವಂತವಾಗಿದ್ದರೂ, ಬಿಬಿಎಂಪಿಯ ಚಿಕ್ಕಪೇಟೆ ವಲಯ ಕಚೇರಿಯು 2025ರ ಏಪ್ರಿಲ್ 23ರಂದು ತಮ್ಮ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಮಾಣ ಪತ್ರವನ್ನು ರದ್ದುಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದ್ದರು.
ಸಂತ್ರಸ್ತರ ಸಂಕಷ್ಟ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಅರ್ಜಿದಾರರು ಬದುಕಿದ್ದರೂ ಅವರ ಹೆಸರಿನಲ್ಲಿ ಮರಣ ಪತ್ರ ಸೃಷ್ಟಿಯಾಗಿದೆ. ಇದರಿಂದ ಅವರ ಆಧಾರ್ ಕಾರ್ಡ್ ಪಡಿತರ ಚೀಟಿಯಿಂದ ಕಡಿತಗೊಂಡಂತಾಗಿದೆ. ಪರಿಣಾಮವಾಗಿ, ಅವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ, ಇದು ಅವರ ಜೀವನೋಪಾಯಕ್ಕೆ ತೊಂದರೆಯಾಗಿದೆ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹೈಕೋರ್ಟ್ ಗರಂ: ಪ್ರಕರಣದ ಗಂಭೀರತೆ ಅರಿತ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು ಬಿಬಿಎಂಪಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿತು. ಮಾರ್ಚ್ 25ರೊಳಗೆ (ಬುಧವಾರ) ಸದರಿ ಮರಣ ಪ್ರಮಾಣ ಪತ್ರವನ್ನು ರದ್ದುಗೊಳಿಸಿ, ಆ ಬಗ್ಗೆ ಅಧಿಕೃತ ಹಿಂಬರಹವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಎಚ್ಚರಿಕೆ: ಒಂದು ವೇಳೆ ಈ ಆದೇಶ ಪಾಲನೆಯಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಅಲ್ಲದೆ, ಈ ಲೋಪಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಜನನ ಮತ್ತು ಮರಣ ನೋಂದಣಾಧಿಕಾರಿ ಹಾಗೂ ಕಿದ್ವಾಯಿ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

