ಧಾರವಾಡ: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ಇಲಾಖೆಗಳ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕೆಂದು ಆಗ್ರಹಿಸಿ ಇಂದು ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸರ ಅನುಮತಿ ಇಲ್ಲದೇ ಯುವಕರು ಹೋರಾಟಕ್ಕಿಳಿದಿದ್ದಾರೆ ಎನ್ನಲಾಗಿದೆ.ಧಾರವಾಡದ ಜಯನಗರ ವೃತ್ತದ ಕಡೆ ರ್ಯಾಲಿ ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಯಕ್ಕಾಗಿ ಮೊರೆ: “ಬೇಕೇ ಬೇಕು ನ್ಯಾಯ ಬೇಕು”, “ಉದ್ಯೋಗ ನೀಡಿ ಇಲ್ಲವೇ ಮನೆಗೆ ಕಳುಹಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಯುವಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಪೊಲೀಸರ ಹರಸಾಹಸ: ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ನೂಕಿ ಮುಂದೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಆಕ್ರೋಶ : ಪ್ರತಿಭಟನೆಯಲ್ಲಿ ವಿಶೇಷವಾಗಿ ಯುವಕರು ರಾಜ್ಯ ಕಾಂಗ್ರೆಸ್ ನಾಯಕರ ಭಾವಚಿತ್ರಗಳನ್ನು ಹಿಡಿದು ಪ್ರದರ್ಶಿಸಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ, ಕೂಡಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ವಿಳಂಬ ನೀತಿಯಿಂದ ವಯೋಮಿತಿ ಮೀರುತ್ತಿದೆ ಎಂದು ಅನೇಕ ಅಭ್ಯರ್ಥಿಗಳು ಅಳಲು ತೋಡಿಕೊಂಡರು.
ಪ್ರಮುಖ ಬೇಡಿಕೆಗಳು: ಕೆಪಿಎಸ್ಸಿ (KPSC) ಮತ್ತು ಇತರ ನೇಮಕಾತಿ ಮಂಡಳಿಗಳ ಮೂಲಕ ಸ್ಥಗಿತಗೊಂಡಿರುವ ಪ್ರಕ್ರಿಯೆಗಳನ್ನು ಪುನರಾರಂಭಿಸಬೇಕು ಹಾಗೂ ಪಾರದರ್ಶಕವಾಗಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಈ ಪ್ರತಿಭಟನೆಯಿಂದಾಗಿ ಧಾರವಾಡದ ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು.

