HomeLatest Newsಸಹಸ್ರಾರು ಭಕ್ತರಿಂದ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ: ಕಾರ್ಯಕ್ರಮಕ್ಕೆ ತೆರೆ

ಸಹಸ್ರಾರು ಭಕ್ತರಿಂದ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ: ಕಾರ್ಯಕ್ರಮಕ್ಕೆ ತೆರೆ

ಕೊಪ್ಪಳ: ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳ ಅಂಜನಾದ್ರಿಯಲ್ಲಿ ಡಿಸೆಂಬರ್ 2 ಮತ್ತು 3 ರಂದು ಎರಡು ದಿನಗಳ ಕಾಲ ನಡೆದ ಹನುಮಮಾಲಾ ಕಾರ್ಯಕ್ರಮಕ್ಕೆ ಬುಧವಾರ ತೆರೆಬಿದ್ದಿದೆ. ಸಹಸ್ರಾರು ಹನುಮ ಮಾಲಾಧಾರಿಗಳು ಅಂಜನಾದ್ರಿಯಲ್ಲಿ ಹನುಮಮಾಲೆಯನ್ನು ವಿಸರ್ಜನೆ ಮಾಡಿದರು. 

ಮಂಗಳವಾರದಿಂದಲೇ ಆರಂಭವಾದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಅಂಜನಾದ್ರಿಯಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವ ಹೆಚ್ಚಿನ ಸಂಖ್ಯೆಯಲ್ಲಿ ಆಂಜನೇಯ ಸ್ವಾಮಿಯ ಭಕ್ತರು ಮತ್ತು ಹನುಮಮಲಾಧಾರಿಗಳು ಆಗಮಿಸಿದ್ದರು. ಬೆಳಂಬೆಳಿಗ್ಗೆ ಎಲ್ಲರೂ ನೀರಿನಲ್ಲಿ ಮಿಂದೆದ್ದು `ಶ್ರೀ ರಾಮ ಜಯರಾಂ’ `ಪವನಸುತ ಆಂಜನೇಯ ಜಯ’ ಹೀಗೆ ಹಲವು ಜಯಘೋಷಗಳನ್ನು ಕೂಗುತ್ತಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಹನುಮ ನಾಮವನ್ನು ಜಪಿಸುತ್ತಾ ಸರತಿ ಸಾಲಿನಲ್ಲಿ ನಿಂತು ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಿದ್ದದು ಕಂಡು ಬಂತು. 

ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಅಕ್ಕ-ಪಕ್ಕದ ಜಿಲ್ಲೆ ಮತ್ತು ಇತರೆ ರಾಜ್ಯಗಳಿಂದಲೂ ಹನುಮಮಾಲಾಧಾರಿಗಳು ಆಗಮಿಸಿದ್ದರು. ರಸ್ತೆಯಗಳಲ್ಲಿ ಕಾಲ್ನಡಿಗೆ ಮುಖಾಂತರ ತಂಡೋಪ ತಂಡವಾಗಿ ಮತ್ತು ದೂರದ ಊರಿನಿಂದ ಬರುವ ಜನರು ವಾಹನಗಳಲ್ಲಿ ಬರುತ್ತಿರುವುದು ಕಂಡು ಬಂದಿತು. ಈ ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಕೊಪ್ಪಳ ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಟ್ಟದ ಮೆಟ್ಟಿಲುಗಳ ಮಧ್ಯಭಾಗದಲ್ಲಿ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಮುಂಜಾಗ್ರತೆಯಾಗಿ ಅಲ್ಲಲ್ಲಿ ಆರೋಗ್ಯ ತಂಡಗಳನ್ನು ನಿಯೋಜಿಸಲಾಗಿತ್ತು. ಭಕ್ತರಿಗೆ ಪ್ರಸಾದಕ್ಕಾಗಿ ವೇದಪಾಠ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಗೋಧಿ ಹುಗ್ಗಿ, ಅನ್ನ, ಸಾಂಬರ್, ಟೊಮಾಟೋ ಚಟ್ನಿ ಒಳಗೊಂಡ ಪ್ರಸಾದವನ್ನು ಭಕ್ತರು ಸವಿದರು. ಜನರಿಗೆ ನೂಕು ನುಗ್ಗಲು ಆಗದಂತೆ ಹಲವಾರು ಕೌಂಟರಗಳನ್ನು ತೆರೆದಿದ್ದರಿಂದ ಶಾಂತ ರೀತಿಯಲ್ಲಿ ಎಲ್ಲರಿಗೂ ಪ್ರಸಾದ ಸ್ವೀಕಾರಕ್ಕೆ ಅನುಕೂಲವಾಯಿತು. ಅಂಜನಾದ್ರಿಯಲ್ಲಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಟ್ರಾಫಿಕ್ ಸಮಸ್ಯೆಯಾಗದಂತೆ ಮುಂಚಿತವಾಗಿ ಪೊಲೀಸರು ಪಾರ್ಕಿಂಗ್ ಸ್ಥಳ ನಿಗದಿಪಡಿಸಿದರಿಂದ ಯಾವುದೇ ಟ್ರಾಫಿಕ್ ಸಮಸ್ಯೆಗಳಾಗಲಿಲ್ಲ. ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಲು ರಚಿಸಲಾದ ವಿವಿಧ ಸಮಿತಿಗಳ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿಗಳು ಆಗಾಗ ಪರಿಶೀಲನೆ ನಡೆಸುತ್ತಿದ್ದರು.

ವೈದ್ಯಕೀಯ ತಂಡಗಳು, ಪೊಲೀಸ್, ಕಂದಾಯ ಇಲಾಖೆ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದರಿಂದ ಭಕ್ತರಿಗೆ ಯಾವುದೇ ಸಮಸ್ಯೆಗಳಾಗಲಿಲ್ಲ. ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅದರ ಕೆಳಗಡೆ ಇರುವ ಪಾದಗಟ್ಟಿಯಲ್ಲಿ ಹೂವಿನ ಅಲಂಕಾರ ಕಳೆದ ವರ್ಷಕ್ಕಿಂತಲೂ ಈ ವರ್ಷ ಚೆನ್ನಾಗಿ ಮಾಡಲಾಗಿತ್ತು. ಅಂಜನಾದ್ರಿ ಬೆಟ್ಟಕ್ಕೆ ವಿವಿಧ ಬಣ್ಣಗಳ ಲೈಟಿಂಗ್ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟವು ರಾತ್ರಿ ಸುಂದರವಾಗಿ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಈ ಸಲ ಅಂಜನಾದ್ರಿ ಬೆಟ್ಟದಿಂದ ಸುಮಾರು ಎರಡು ಕಿ.ಮೀ ವ್ಯಾಪ್ತಿಯಲ್ಲಿ ರಾಮನಾಮ ಸ್ಮರಣೆಗಾಗಿ ಧ್ವನಿವರ್ಧಕಗಳನ್ನು ಅಳವಡಿಸಿದ್ದು ಮತ್ತು ಹನುಮಮಾಲಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಿಸಿದ್ದು ವಿಶೇಷವಾಗಿತ್ತು.

ನಡೆದುಕೊಂಡು ಬರುವ ಹನುಮ ಮಾಲಾಧಾರಿಗಳಿಗೆ ಅನುಕೂಲವಾಗಲು ರಸ್ತೆಗಳ ಮಾರ್ಗ ಮಧ್ಯದ ಅಲ್ಲಲ್ಲಿ ಟೆಂಟ್‌ಗಳನ್ನು ಹೊಡೆದು ವಿಶ್ರಾಂತಿ ಸ್ಥಳಗಳನ್ನು ಮಾಡಲಾಗಿತ್ತು. ಕೆಲವು ಗ್ರಾಮಗಳಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿರುವುದು ಮಾರ್ಗಮಧ್ಯದಲ್ಲಿ ಕಂಡು ಬರುತಿತ್ತು. ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಎಲ್ಲಾ ಕಡೆ ಸ್ವಚ್ಛತೆ ಕಾಪಡಲು ಹಲವಾರು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸವರು ವಾಹನಗಳನ್ನು ಪಾರ್ಕಿಂಗ್‌ಗಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಬರುವ ವಾಹನಗಳಿಗೆ ನಿರ್ದೇಶನ ನೀಡುತ್ತಿದ್ದರು. ಪ್ರಮುಖ ರಸ್ತೆಗಳು, ಅಂಜನಾದ್ರಿಯ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ನಿಗಾ ವಹಿಸಲಾಗಿತ್ತು.

ಅಂಜನಾದ್ರಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಲ್ಲಾ ರೀತಿಯ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು. ಕುಡಿಯುವ ನೀರು, ಸ್ನಾನ ಗೃಹಗಳು, ವಾಹನಗಳಿಗೆ ಪಾರ್ಕಿಂಗ್, ಪ್ರಸಾದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಹಾಯವಾಣಿ, ಆರೋಗ್ಯ ಸೇವೆ, ಭದ್ರತೆಗಾಗಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿಯೋಜನೆ ಮತ್ತು ಕಾರ್ಯಕ್ರಮ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ `ಹನುಮಮಾಲಾ ರೂಟ್ ಮ್ಯಾಪ್-2025′ ಎಂಬ ವೆಬ್‌ಸೈಟ್ ಅನಾವರಣ ಮಾಡಲಾಗಿತ್ತು. 

ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದರಿಂದ ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳು ಸೇರಿ ಎಲ್ಲರಿಗೂ ತುಂಬಾ ಅನುಕೂಲವಾಯಿತು. ಈ ಮೂಲಕ ಡಿಸೆಂಬರ್ 2 ಮತ್ತು ಡಿಸೆಂಬರ್ 3ರಂದು ಎರಡೂ ದಿನಗಳ ಕಾಲ ನಡೆದ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳ ಸಹಕಾರ ಮತ್ತು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹಾಗೂ ಇತರೆ ವಿವಿಧ ಸಮಿತಿಗಳ ಅಧಿಕಾರಿಗಳು ಅಂಜನಾದ್ರಿ ಬೆಟ್ಟಕ್ಕೆ ನಿರಂತರವಾಗಿ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular