ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದ್ದು, ದೇಶದಾದ್ಯಂತ 67,956 ಕಿಲೋಮೀಟರ್ ವ್ಯಾಪಿಸಿದೆ. ಪ್ರತಿದಿನ ಸುಮಾರು 13,000 ಪ್ರಯಾಣಿಕ ರೈಲುಗಳನ್ನು ನಿರ್ವಹಿಸುವ ಮೂಲಕ ಲಕ್ಷಾಂತರ ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಹಾಯ ಮಾಡುತ್ತದೆ.
ಭಾರತದಲ್ಲಿ ರೈಲು ಪ್ರಯಾಣವು ಒಂದು ವಿಶಿಷ್ಟ ಅನುಭವವಾಗಿದೆ. ಅದರಲ್ಲೂ ಪ್ರಯಾಣದ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಿಸಿ ಊಟವನ್ನು ಆನಂದಿಸಿದರೆ, ಆ ಮಜಾವೇ ಬೇರೆ. ಸಾಮಾನ್ಯವಾಗಿ, ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ರೈಲುಗಳು ಪ್ಯಾಂಟ್ರಿ ಸೇವೆಗಳನ್ನು ಹೊಂದಿರುತ್ತವೆ, ಅಲ್ಲಿ ಪ್ರಯಾಣಿಕರಿಗೆ ಊಟವನ್ನು ನೀಡಲಾಗುತ್ತದೆ ಅಥವಾ ರೈಲು ನಿಲ್ದಾಣದಲ್ಲಿ ನಿಂತಾಗ ಹೊರಗಿನಿಂದ ಖರೀದಿಸಬಹುದು.
ರೈಲಿನಲ್ಲಿ ನೀಡುವ ಊಟ ಸೇರಿದಂತೆ, ಈ ಊಟಗಳಿಗೆ ಪ್ರಯಾಣಿಕರು ಹಣ ಪಾವತಿಸಬೇಕಾಗುತ್ತದೆ. ಆದರೆ, ಪ್ರಯಾಣಿಕರಿಗೆ ಸಂಪೂರ್ಣವಾಗಿ ಉಚಿತವಾಗಿ ಊಟವನ್ನು ನೀಡುವ ವಿಶೇಷ ರೈಲೊಂದಿದೆ ಎಂದು ನಿಮಗೆ ತಿಳಿದಿದೆಯೇ ? ನಾವು ಸಚ್‌ಖಂಡ್ ಎಕ್ಸ್‌ಪ್ರೆಸ್ (12715) ಬಗ್ಗೆ ಮಾತನಾಡುತ್ತಿದ್ದೇವೆ, ಇದರಲ್ಲಿ ಪ್ರಯಾಣಿಕರಿಗೆ ಇಡೀ ಪ್ರಯಾಣದ ಉದ್ದಕ್ಕೂ ಬಿಸಿ ಊಟವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.
ಸಚ್‌ಖಂಡ್ ಎಕ್ಸ್‌ಪ್ರೆಸ್ ಅಮೃತಸರ ಮತ್ತು ನಾಂದೇಡ್ ನಡುವೆ ಸಂಚರಿಸುತ್ತದೆ, ಒಟ್ಟು 2,081 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಇದು ಸಿಖ್ಖರ ಎರಡು ಪ್ರಮುಖ ಧಾರ್ಮಿಕ ಸ್ಥಳಗಳಾದ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ ಮತ್ತು ನಾಂದೇಡ್‌ನ ಶ್ರೀ ಹಜೂರ್ ಸಾಹಿಬ್ ಅನ್ನು ಸಂಪರ್ಕಿಸುತ್ತದೆ. ಸಚ್‌ಖಂಡ್ ಎಕ್ಸ್‌ಪ್ರೆಸ್ ತನ್ನ 2,000 ಕಿ.ಮೀ ಗಿಂತಲೂ ಉದ್ದದ ಪ್ರಯಾಣದಲ್ಲಿ 39 ನಿಲ್ದಾಣಗಳಲ್ಲಿ ನಿಲ್ಲುತ್ತದೆ ಮತ್ತು 6 ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಊಟವನ್ನು ನೀಡಲಾಗುತ್ತದೆ.
ವರದಿಗಳ ಪ್ರಕಾರ, ಕಳೆದ ಮೂರು ದಶಕಗಳಿಂದ ರೈಲಿನಲ್ಲಿ ನಡೆಯುತ್ತಿರುವ ಲಂಗರ್‌ನಿಂದಾಗಿ (ಸಮುದಾಯ ಅಡುಗೆ ಮನೆ) ಈ ಉಚಿತ ಊಟ ಸಾಧ್ಯವಾಗಿದೆ. ಪ್ರಯಾಣಿಕರು ಯಾವುದೇ ಗಡಿಬಿಡಿಯಿಲ್ಲದೆ ಊಟ ಸ್ವೀಕರಿಸಲು ಅನುಕೂಲವಾಗುವಂತೆ ರೈಲು ಸಾಕಷ್ಟು ಸಮಯದವರೆಗೆ ನಿಲ್ಲುತ್ತದೆ. ರೈಲಿನಲ್ಲಿ ಪ್ರಯಾಣಿಸುವ ಅನೇಕ ಪ್ರಯಾಣಿಕರು ಲಂಗರ್ ಸ್ವೀಕರಿಸಲು ತಮ್ಮದೇ ಆದ ಪಾತ್ರೆಗಳನ್ನು ತರುತ್ತಾರೆ. ಲಂಗರ್‌ನಲ್ಲಿ ಕಢಿ-ಚಾವಲ್, ದಾಲ್ ಮತ್ತು ಸಬ್ಜಿಯಂತಹ ರುಚಿಕರವಾದ ಸಸ್ಯಾಹಾರಿ ಊಟವನ್ನು ನೀಡಲಾಗುತ್ತದೆ.
ವಿಶೇಷವೆಂದರೆ, ರೈಲಿನಲ್ಲಿ ಪ್ಯಾಂಟ್ರಿ ಇದ್ದರೂ ಅಲ್ಲಿ ಯಾವುದೇ ಆಹಾರವನ್ನು ತಯಾರಿಸಲಾಗುವುದಿಲ್ಲ. ಅಂದಾಜು 2,000 ಜನರು ಪ್ರತಿದಿನ ಉಚಿತ ಊಟವನ್ನು ಪಡೆಯುತ್ತಾರೆ. ಈ ಉಚಿತ ಲಂಗರ್ ಸೇವೆಯು ಸುಮಾರು 30 ವರ್ಷಗಳ ಹಿಂದೆ 1995 ರಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ.