ವಾಸ್ತುಶಿಲ್ಪಕ್ಕೆ ಪ್ರಸಿದ್ಧ ಈ ಪ್ರವಾಸಿ ಸ್ಥಳ

ವಿದೇಶಿ ಪ್ರವಾಸಿಗರ ಪಾಲಿನ ಮಾಯಾನಗರಿ ಮಾಸ್ಕೋ. ಇತರೆ ದೇಶಗಳಿಗೆ ಹೋಲಿಸಿದರೆ ಮಾಸ್ಕೋ ಪ್ರವಾಸ ಕೈಗೊಳ್ಳುವ ಭಾರತೀಯರು ಸ್ವಲ್ಪ ಕಡಿಮೆಯೇ. ಯಾಕೆಂದರೆ ಅಲ್ಲಿನ ರಷ್ಯನ್ನರು ಸ್ನೇಹ ಜೀವಿಗಳಲ್ಲ.

ಮೊಸ್ಕೊವ ನದಿ ದಡದಲ್ಲಿರುವ ಮಾಸ್ಕೋ ರಷ್ಯಾದ ರಾಜಧಾನಿ. ಈ ನಗರ ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. 16 ನೇ ಶತಮಾನದಲ್ಲಿ ನಿರ್ಮಿತವಾದ ಸೈನ್ಟ್ ಬೇಸಿಲ್ ಕ್ಯಾಥೆಡ್ರೆಲ್ ಇದಕ್ಕೆ ಸಾಕ್ಷಿ. ಒಂಭತ್ತು ಪ್ರಾರ್ಥನಾ ಮಂದಿರಗಳಿರುವ ಈ ಕ್ಯಾಥೆಡ್ರೆಲ್ ರಷ್ಯಾ ದೇಶದ ಒಂದು ರಮಣೀಯ ಚಿನ್ಹೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡನೇ ಮಹಾಯುದ್ಧದ ನಂತರ ಸೊವಿಯಟ್ ರಷ್ಯಾದ ಕ್ರಾಂತಿಕಾರಿ ನಾಯಕ ಸ್ಟಾಲಿನ್, ಮಾಸ್ಕೋ ನಗರಿಯ ರೂಪು ಹೆಚ್ಚಿಸುವ ಸಲುವಾಗಿ ‘ಏಳು ಸೋದರಿಯರು’ ಎಂದು ಪ್ರಸಿದ್ದಿಯಾದ ಏಳು ಭವ್ಯ ಭವನಗಳನ್ನು ಕಟ್ಟಿಸಿದ. ಶೀತಲ ಸಮರದ ದಿನಗಳಲ್ಲಿ, ಕಮ್ಯುನಿಸ್ಟ್ ನಾಯಕರು ಅಡಗಿಕೊಳ್ಳುತ್ತಿದ್ದ ಭೂಗತ ಕೋಣೆಗಳೂ ಇಲ್ಲಿವೆ.

ಇಲ್ಲಿನ ರೆಡ್ ಸ್ಕ್ವೇರ್ ನಲ್ಲಿ 1924ರಲ್ಲಿ ನಿಧನರಾದ ರಷ್ಯಾದ ಕ್ರಾಂತಿಯ ಪಿತಾಮಹ ಎಂದು ಕರೆಸಿಕೊಳ್ಳುವ ಲೆನಿನ್‌ನ ಮೃತಶರೀರವನ್ನು ಇಡಲಾಗಿದೆ. ಇದನ್ನು ‘ಆಧುನಿಕ ಮಮ್ಮಿ’ ಎಂದು ಕರೆಯುತ್ತಾರೆ. ಅನೇಕ ಬಾರಿ ಲೆನಿನ್‌ನ ಶರೀರವನ್ನು ನಾಶ ಮಾಡುವ ಯತ್ನವೂ ನಡೆದಿದೆ. ಹಾಗಾಗಿ ಇಲ್ಲಿ ಭದ್ರತೆ ಹೆಚ್ಚು. ಸ್ಟಾಲಿನ್ ಸೇರಿದಂತೆ ಹಲವಾರು ಜನಪ್ರಿಯ ನಾಯಕರ ಸಮಾಧಿಗಳನ್ನು ಇಲ್ಲಿ ನೋಡಬಹುದು.

ಕ್ಯಾಥೆಡ್ರೆಲ್ ಆಫ್ ಕ್ರೈಸ್ಟ್ ದಿ ಸೇವಿಯರ್ ಜಗತ್ತಿನ ಅತೀ ಉದ್ದನೆಯ ಸಾಂಪ್ರದಾಯಿಕ ಚರ್ಚ್. ಇದು ಸ್ಟಾಲಿನ್ ನ ಕನಸಿನ ಕಟ್ಟಡವಾಗಿದ್ದು, ನಿರ್ಮಿಸಲು 40 ವರ್ಷಗಳೇ ಬೇಕಾಯಿತಂತೆ.

ಕ್ರೆಮ್ಲಿನ್, ಮಾಸ್ಕೋ ನಗರದ ಒಳಗಿನ ಒಂದು ಕಟ್ಟಡಗಳ ಸಂಕೀರ್ಣ. ಇಲ್ಲಿ ಕ್ಯಾಥೆಡ್ರೆಲ್ ಗಳು, ಅರಮನೆಗಳು, ರಾಷ್ಟ್ರಪತಿ ಪುಟಿನ್‌ನ ಆಡಳಿತ ಕಚೇರಿ ಇತ್ಯಾದಿ ಸುಪ್ರಸಿದ್ದ ಕಟ್ಟಡಗಳಿವೆ.

ಕ್ರೆಮ್ಲಿನ್‌ನಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡದೆಂದು ಕರೆಸಿಕೊಳ್ಳುವ ಸುಮಾರು 2 ಲಕ್ಷ ಕಿ. ಗ್ರಾಂ. ತೂಕದ ಚರ್ಚ್ ಘಂಟೆ ಹಾಗೂ ಸರಾಸರಿ 35,000 ಕಿ. ಗ್ರಾಂ ತೂಕದ ದೈತ್ಯ ಗಾತ್ರದ ಫಿರಂಗಿಯನ್ನು ಕಾಣಬಹುದು.

ಪ್ರವಾಸಿಗರು ನೋಡಲೇ ಬೇಕಾದ ಇನ್ನೊಂದು ಸ್ಥಳ ಮಾಸ್ಕೋ ಮೆಟ್ರೋ. ಮೆಟ್ರೋ ಸುರಂಗ ಮಾರ್ಗವನ್ನು ಅದ್ಭುತವಾಗಿ ಸಿಂಗರಿಸಿಲಾಗಿದೆ. ಮಹಾಯುದ್ಧದ ಸಮಯದಲ್ಲಿ ಸಾವಿರಾರು ರಷ್ಯನ್ನರನ್ನು ಬಾಂಬ್ ದಾಳಿಯಿಂದ ಕಾಪಾಡಿದ್ದು ಇದೇ ಸುರಂಗ ಮಾರ್ಗ. ಮೆಟ್ರೊದಲ್ಲಿರುವ ಲೋಹದ ನಾಯಿಯ ಮೂಗನ್ನು ಸವರಿದರೆ ನಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ಎಂಬುದು ಇಲ್ಲಿಯ ಜನರ ನಂಬಿಕೆ.

ಇದಿಷ್ಟೇ ಅಲ್ಲದೆ ಸ್ಪಾರೋ ಬೆಟ್ಟ, ಕಾನ್ವೆಂಟ್, ಗಮ್ ಮಾಲ್, ಬ್ಯಾಲೆ, ಸಂಗ್ರಹಾಲಯಗಳು, ಅರಮನೆಗಳು, ವಿಕ್ಟರಿ ಪಾರ್ಕ್ ಇತ್ಯಾದಿ ಪ್ರವಾಸಿ ತಾಣಗಳು ಮರೆಯಲಾರದ ಅನುಭವ ನೀಡುವುದರಲ್ಲಿ ಅನುಮಾನ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read