ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆ ಗೆದ್ದು ಕೇರಳದಲ್ಲಿ ಇತಿಹಾಸ ಬರೆದಿದ್ದ ಬಿಜೆಪಿ ಪಕ್ಷ ನೂತನ ಮೇಯರ್ ಆಯ್ಕೆ ಮಾಡಿದೆ. ಶುಕ್ರವಾರ ವಕೀಲ, ಬಿಜೆಪಿ ನಾಯಕ ವಿ.ವಿ. ರಾಜೇಶ್ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಮೊದಲ ಮೇಯರ್ ಆಗಿ ವಕೀಲನನ್ನು ಬಿಜೆಪಿ ಆಯ್ಕೆ ಮಾಡಿದೆ. ಒಟ್ಟು 100 ಮತಗಳ ಪೈಕಿ ವಿ.ವಿ. ರಾಜೇಶ್ 51 ಮತಗಳನ್ನು ಪಡೆದರು. ಪಕ್ಷೇತರ ಕೌನ್ಸಿಲರ್ ಎಂ. ರಾಧಾಕೃಷ್ಣನ್ ಅವರು ಬಿಜೆಪಿ ಬೆಂಬಲಿಸಿದರು.
ಎಡ ಪ್ರಜಾಸತ್ತಾತ್ಮಕ ರಂಗದ ಮೇಯರ್ ಅಭ್ಯರ್ಥಿಯಾಗಿ ಆರ್.ಪಿ. ಶಿವಾಜಿ ಕಣದಲ್ಲಿದ್ದರು. ಅವರು ಚುನಾವಣೆಯಲ್ಲಿ 29 ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕೆ.ಎಸ್. ಶಬರಿನಾಥನ್ ಕೇವಲ 17 ಮತಗಳನ್ನು ಪಡೆದರು.
ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 50 ಸೀಟುಗಳಲ್ಲಿ ಜಯಗಳಿಸಿತ್ತು. ಬಹುಮತ ಪಡೆದು ಮೇಯರ್ ಆಯ್ಕೆಗೆ ಪಕ್ಷಕ್ಕೆ ಒಂದು ಸೀಟು ಕಡಿಮೆ ಇತ್ತು. ಪಕ್ಷೇತರ ಸದದ್ಯ ಎಂ. ರಾಧಾಕೃಷ್ಣನ್ ಬಿಜೆಪಿ ಬೆಂಬಲಿಸಿದ ಕಾರಣ ಮೇಯರ್ ಪಟ್ಟ ಬಿಜೆಪಿ ಪಾಲಾಗಿದೆ.
ಚುನಾವಣೆಯಲ್ಲಿ ಪೌಡಿಕೋಣಂ ವಾರ್ಡ್‌ನ ಪಕ್ಷೇತರ ಸದಸ್ಯ ಮತ್ತು ಕಾಂಗ್ರೆಸ್ ಬಂಡಾಯ ನಾಯಕ ಸುಧೀಶ್ ಕುಮಾರ್ ಮತ ಚಲಾಯಿಸಲಿಲ್ಲ. ಅಭ್ಯರ್ಥಿಯೊಬ್ಬರ ನಿಧನದಿಂದಾಗಿ ವಿಳಿಂಜಂ ವಾರ್ಡ್‌ನ ಚುನಾವಣೆಯನ್ನು ಈ ಹಿಂದೆ ಮುಂದೂಡಲಾಗಿತ್ತು.
ಮತದಾನದ ಬಳಿಕ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಅನು ಕುಮಾರಿ ಅವರು ವಿ.ವಿ.ರಾಜೇಶ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮಹಾನಗರ ಪಾಲಿಕೆ ಕಚೇರಿ ಮುಂದೆ ಜಮಾವಣೆಗೊಂಡಿದ್ದ ಬಿಜೆಪಿ ಕಾರ್ಯಕರ್ತರು, ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಘೋಷಣೆಗಳನ್ನು ಕೂಗಿದರು.
49 ವರ್ಷಗಳ ಕಾಲ ಎಲ್‌ಡಿಎಫ್ ಆಡಳಿತ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಕೊನೆಗೊಂಡಿದೆ. 101 ಸೀಟುಗಳನ್ನು ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ 50 ಸೀಟು ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಿತ್ತು. ಈಗ ಮೇಯರ್ ಪಟ್ಟವನ್ನು ಪಡೆದು ಕೇರಳ ರಾಜ್ಯದ ರಾಜಧಾನಿಯ ಅಧಿಕಾರವನ್ನು ಪಡೆದುಕೊಂಡಿದೆ.
ವಕೀಲರು ಆಗಿರುವ ವಿ.ವಿ.ರಾಜೇಶ್ 2ನೇ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ್ದು, ಅವರು ಮೇಯರ್ ಆಗಿದ್ದಾರೆ. ರಾಜೇಶ್ ಕೊಡುಂಗನೂರು ವಾರ್ಡ್ ಅನ್ನು ಪ್ರತಿನಿಧಿಸುತ್ತಾರೆ. ಮಹಾನಗರ ಪಾಲಿಕೆಯ ಉಪ ಮೇಯರ್ ಆಗಿ ಜಿ.ಎಸ್.ಆಶಾನಾಥ್ ಆಯ್ಕೆಯಾಗಿದ್ದಾರೆ.
ವಿ.ವಿ.ರಾಜೇಶ್ ಮಹಾನಗರ ಪಾಲಿಕೆ ಚುನಾವಣೆಯ ಮೇಯರ್ ಅಭ್ಯರ್ಥಿ ಎಂದು ಬಿಜೆಪಿ ಗುರುವಾರ ಘೋಷಣೆ ಮಾಡಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಜೇಶ್ ತಿರುವನಂತಪುರಂ ಅನ್ನು ದೇಶದ ಅತ್ಯುತ್ತಮ ಮೂರು ನಗರಗಳಲ್ಲಿ ಒಂದನ್ನಾಗಿ ಮಾಡಲು ಪಕ್ಷವು ಶ್ರಮಿಸಲಿದೆ ಎಂದು ಭರವಸೆ ಕೊಟ್ಟಿದ್ದರು.
“ಬಲವಾದ ವಿರೋಧ ಪಕ್ಷವಿರುವುದು ಒಳ್ಳೆಯದು. ನಾವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 45 ದಿನಗಳಲ್ಲಿ ನಗರಕ್ಕೆ ಭೇಟಿ ನೀಡಲಿದ್ದಾರೆ” ಎಂದು ರಾಜೇಶ್ ಹೇಳಿದ್ದರು.
ಮೇಯರ್ ಹುದ್ದೆಗೆ ವಿ.ವಿ.ರಾಜೇಶ್ ಆಯ್ಕೆ ಮಾಡುವಲ್ಲಿ ಆರ್‌ಎಸ್‌ಎಸ್‌ನ ಪ್ರಭಾವವಿದೆ ಎಂಬ ಮಾತುಗಳು ಇವೆ. ಶ್ರೀಲೇಖಾ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ ಎಂಬ ಕಾರಣಕ್ಕೆ ಕೆಲವು ನಾಯಕರು ಅವರ ಉಮೇದುವಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಉತ್ತಮ ರಾಜಕೀಯ ಚತುರತೆ ಇರುವ ನಾಯಕರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

