ಅಡುಗೆಮನೆ ಎನ್ನುವುದು ಕೇವಲ ನಮ್ಮ ಹಸಿವನ್ನು ನೀಗಿಸುವ ಸ್ಥಳ ಮಾತ್ರವಲ್ಲ, ಅದು ನಮ್ಮ ಮನೆಯ ಆರೋಗ್ಯದ ದೇವಾಲಯವೂ ಹೌದು. ಆದರೆ ಇತ್ತೀಚಿನ ಟ್ರೆಂಡ್ ಹೆಸರಿನಲ್ಲಿ ನಾವು ಬಳಸುತ್ತಿರುವ ಅಲ್ಯೂಮಿನಿಯಂ, ಪ್ಲಾಸ್ಟಿಕ್, ನಾನ್-ಸ್ಟಿಕ್ ಕೋಟಿಂಗ್‌ಗಳಂತಹ ವಸ್ತುಗಳು ನಮ್ಮ ದೇಹಕ್ಕೆ ತಿಳಿಯದಂತೆ ವಿಷವನ್ನು ತುಂಬಿಸುತ್ತಿವೆ.
ನಮ್ಮ ಹಿರಿಯರು ಬಳಸುತ್ತಿದ್ದ ಮಣ್ಣಿನ ಪಾತ್ರೆಗಳು ಮತ್ತು ಕಬ್ಬಿಣದ ಕಡಾಯಿಗಳನ್ನು ಬದಿಗಿಟ್ಟು, ಬಣ್ಣ ಬಣ್ಣದ ಪ್ಲಾಸ್ಟಿಕ್ ಡಬ್ಬಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ನಮಗೆ ತಿಳಿಯದಂತೆ ನಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿದ್ದೇವೆ. ಇವುಗಳಿಂದ ಬಿಡುಗಡೆಯಾಗುವ ಟಾಕ್ಸಿನ್‌ಗಳು (ವಿಷಕಾರಿ ಅಂಶಗಳು) ಆಹಾರವನ್ನು ಕಲುಷಿತಗೊಳಿಸಿ, ನಮ್ಮ ಆರೋಗ್ಯವನ್ನು ನಿಧಾನವಾಗಿ ಹಾಳುಮಾಡುತ್ತಿವೆ.
ನಮ್ಮ ಅಡುಗೆಮನೆ ಒಂದು ಪ್ರಯೋಗಾಲಯದಂತೆ. ಅದರಲ್ಲಿರುವ ವಸ್ತುಗಳು ಮತ್ತು ಪದಾರ್ಥಗಳೊಂದಿಗೆ ನಾವು ಪ್ರತಿದಿನ ಅಡುಗೆ ಎಂಬ ಪ್ರಯೋಗವನ್ನು ಮಾಡುತ್ತಿರುತ್ತೇವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಅನುಕೂಲಕ್ಕಾಗಿ ಬಳಸುವ ನಾನ್-ಸ್ಟಿಕ್ ಪ್ಯಾನ್‌ಗಳಲ್ಲಿನ ಟೆಫ್ಲಾನ್ ಕೋಟಿಂಗ್ ಅತಿಯಾದ ಶಾಖಕ್ಕೆ ಒಳಗಾದಾಗ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಿ, ಹಾರ್ಮೋನ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗೆಯೇ ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಇಡುವುದರಿಂದ ಮೈಕ್ರೋ ಪ್ಲಾಸ್ಟಿಕ್ ಕಣಗಳು ಆಹಾರದಲ್ಲಿ ಬೆರೆತು ಕ್ಯಾನ್ಸರ್‌ನಂತಹ ಪ್ರಾಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು ಎಂದು ‘ನ್ಯಾಷನಲ್ ಸೆಂಟರ್ ಫಾರ್ ಹೆಲ್ತ್ ರಿಸರ್ಚ್’ (National Center for Health Research) ಅಧ್ಯಯನ ತಿಳಿಸಿದೆ.
ಇನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆ ಲೋಹದ ಸೂಕ್ಷ್ಮ ಕಣಗಳು ಆಹಾರವನ್ನು ಸೇರಿ ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ ಎಂದು ‘ಸೈನ್ಸ್ ಡೈರೆಕ್ಟ್’ (Science Direct) ಅಧ್ಯಯನ ಹೇಳಿದೆ. ಅಷ್ಟೇ ಅಲ್ಲದೆ, ಇಂದಿನ ಆಧುನಿಕ ಕಾಲದಲ್ಲಿ ನಮಗೆ ಬಹಳ ರೂಢಿಯಾಗಿರುವ ಮೈಕ್ರೋವೇವ್ ಓವನ್ ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಸ್ವಚ್ಛತೆಗಾಗಿ ಬಳಸುವ ತೀಕ್ಷ್ಣವಾದ ಕೆಮಿಕಲ್ ಕ್ಲೀನರ್‌ಗಳು ಉಸಿರಾಟ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ.
ಹೀಗೆ ನಾವು ಅಡುಗೆ ಮಾಡುವ ಪಾತ್ರೆಗಳಿಂದ ಹಿಡಿದು ಆಹಾರವನ್ನು ಸಂಗ್ರಹಿಸಿಡುವ ಪದ್ಧತಿಗಳವರೆಗೆ ಮಾಡುವ ಸಣ್ಣ ಸಣ್ಣ ತಪ್ಪುಗಳು ದೀರ್ಘಕಾಲದ ಕಾಯಿಲೆಗಳಿಗೆ ನಾಂದಿ ಹಾಡುತ್ತವೆ.
ಅದಕ್ಕಾಗಿಯೇ ಅಡುಗೆಮನೆಯಲ್ಲಿ ಬಳಸುವ ವಸ್ತುಗಳ ಗುಣಮಟ್ಟ ಮತ್ತು ಅವುಗಳ ಪ್ರಭಾವದ ಬಗ್ಗೆ ಜಾಗೃತಿ ಅಗತ್ಯ. ಸಾಧ್ಯವಾದಷ್ಟು ಪ್ರಕೃತಿಗೆ ಹತ್ತಿರವಾಗಿರುವ ಮಣ್ಣು, ಹಿತ್ತಾಳೆ ಮತ್ತು ಸ್ಟೀಲ್ ಪಾತ್ರೆಗಳನ್ನು ಬಳಸುವುದು ನಮ್ಮ ಆರೋಗ್ಯಕ್ಕೆ ಉತ್ತಮ ರಕ್ಷಣೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಅಡುಗೆಮನೆಯಲ್ಲಿರುವ ಹಾನಿಕಾರಕ ವಸ್ತುಗಳು, ಅವು ಉಂಟುಮಾಡುವ ನಷ್ಟಗಳು ಮತ್ತು ಅವುಗಳಿಗೆ ಪರ್ಯಾಯಗಳ ಬಗ್ಗೆ ತಿಳಿದುಕೊಳ್ಳೋಣ.
1. ಪ್ಲಾಸ್ಟಿಕ್ ವಸ್ತುಗಳು ಮತ್ತು ಕಟಿಂಗ್ ಬೋರ್ಡ್‌ಗಳು
ಇತ್ತೀಚೆಗೆ ನಮ್ಮ ಅಡುಗೆಮನೆಯಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ವಸ್ತುಗಳೇ ತುಂಬಿರುತ್ತವೆ. ಬಿಸಿ ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಹಾಕಿದಾಗ ಅಥವಾ ಪ್ಲಾಸ್ಟಿಕ್ ಸೌಟುಗಳನ್ನು ಬಳಸಿದಾಗ ಬಿಪಿಎ (ಬಿಸ್ಫೆನಾಲ್-ಎ) ನಂತಹ ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಕರಗುತ್ತವೆ. ಹಾಗೆಯೇ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳ ಮೇಲೆ ತರಕಾರಿಗಳನ್ನು ಕತ್ತರಿಸುವಾಗ ಮೈಕ್ರೋ ಪ್ಲಾಸ್ಟಿಕ್ ಕಣಗಳು ಅಡುಗೆಯಲ್ಲಿ ಸೇರಿಕೊಂಡು ನಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಆದ್ದರಿಂದ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಗಾಜು, ಸ್ಟೇನ್‌ಲೆಸ್ ಸ್ಟೀಲ್ ಅಥವಾ ಮರದಿಂದ ಮಾಡಿದ ವಸ್ತುಗಳನ್ನು ಬಳಸುವುದು ಒಳ್ಳೆಯದು.
2. ಗೀರು ಬಿದ್ದ ನಾನ್-ಸ್ಟಿಕ್ ಪ್ಯಾನ್‌ಗಳು
ಅಡುಗೆಮನೆಯಲ್ಲಿರುವ ನಾನ್-ಸ್ಟಿಕ್ ಪಾತ್ರೆಗಳ ಮೇಲಿರುವ ಟೆಫ್ಲಾನ್ ಕೋಟಿಂಗ್‌ಗೆ ಗೀರು ಬಿದ್ದಾಗ ಅಥವಾ ಅವುಗಳನ್ನು ಅತಿಯಾದ ತಾಪಮಾನದಲ್ಲಿ ಬಳಸಿದಾಗ ಪಿಎಫ್‌ಎಎಸ್ (PFAS) ಎಂಬ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇವು ದೀರ್ಘಕಾಲದ ಹಾರ್ಮೋನ್ ಸಮಸ್ಯೆಗಳಿಗೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ನಾನ್-ಸ್ಟಿಕ್ ಕೋಟಿಂಗ್ ಹಾಳಾದ ನಂತರ ಅವುಗಳನ್ನು ಬಳಸಬಾರದು. ಇವುಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಬಳಸುವುದು ಉತ್ತಮ.
3. ಅಲ್ಯೂಮಿನಿಯಂ ಪಾತ್ರೆಗಳು ಮತ್ತು ಫಾಯಿಲ್
ಸಾಮಾನ್ಯವಾಗಿ ಅಲ್ಯೂಮಿನಿಯಂ ಬೇಗನೆ ಪ್ರತಿಕ್ರಿಯಿಸುವ ಲೋಹವಾಗಿದೆ. ಪ್ರಮುಖವಾಗಿ ನಿಂಬೆರಸ, ಟೊಮೆಟೊ, ಹುಣಿಸೇಹಣ್ಣಿನಂತಹ ಆಮ್ಲೀಯ (ಹುಳಿ) ಪದಾರ್ಥಗಳನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದಾಗ ಅಥವಾ ಅಲ್ಯೂಮಿನಿಯಂ ಫಾಯಿಲ್‌ಗಳಲ್ಲಿ ಸುತ್ತಿಟ್ಟಾಗ ಲೋಹದ ಕಣಗಳು ಆಹಾರದಲ್ಲಿ ಸೇರಿ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಆದ್ದರಿಂದ ಅಲ್ಯೂಮಿನಿಯಂ ಪಾತ್ರೆಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಮಣ್ಣಿನ ಪಾತ್ರೆಗಳನ್ನು ಬಳಸುವುದು ಸೂಕ್ತ.
4. ಕಿಚನ್ ಸ್ಪಾಂಜ್‌ಗಳು
ಅಡುಗೆಯ ನಂತರ ಪಾತ್ರೆಗಳನ್ನು ತೊಳೆಯಲು ಬಳಸುವ ಸ್ಪಾಂಜ್‌ಗಳು ಯಾವಾಗಲೂ ತೇವವಾಗಿರುವುದರಿಂದ ಅವುಗಳಲ್ಲಿ ಇ-ಕೋಲಿ (E. coli) ಅಥವಾ ಸಾಲ್ಮೊನೆಲ್ಲಾ (Salmonella) ನಂತಹ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸ್ಪಾಂಜ್‌ಗಳನ್ನು ಆಗಾಗ ಬಿಸಿ ನೀರಿನಲ್ಲಿ ಹಾಕಿ ಸ್ವಚ್ಛಗೊಳಿಸಬೇಕು. ಕನಿಷ್ಠ 15 ದಿನಗಳಿಗೊಮ್ಮೆ ಇವುಗಳನ್ನು ಬದಲಾಯಿಸುವುದು ಅಥವಾ ಸಿಲಿಕಾನ್ ಸ್ಕ್ರಬ್ಬರ್‌ಗಳನ್ನು ಬಳಸುವುದು ಉತ್ತಮ.
5. ಮೆಲಮೈನ್ ಪಾತ್ರೆಗಳು
ಇತ್ತೀಚಿನ ದಿನಗಳಲ್ಲಿ ಅನೇಕರು ಮೆಲಮೈನ್ ಪಾತ್ರೆಗಳನ್ನು ಬಳಸುತ್ತಿದ್ದಾರೆ. ಇವುಗಳಲ್ಲಿ ಬಿಸಿ ಬಿಸಿ ಆಹಾರ ಅಥವಾ ಸೂಪ್‌ಗಳನ್ನು ಹಾಕಿದಾಗ, ಅದರಲ್ಲಿರುವ ರಾಸಾಯನಿಕಗಳು ಆಹಾರಕ್ಕೆ ಸೋರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಇವುಗಳ ಬದಲಿಗೆ ಗಾಜು ಅಥವಾ ಸೆರಾಮಿಕ್ ಪಾತ್ರೆಗಳು ಮತ್ತು ಪ್ಲೇಟ್‌ಗಳನ್ನು ಬಳಸುವುದು ಒಳ್ಳೆಯದು.
ಈ ಲೇಖನದಲ್ಲಿರುವ ಮಾಹಿತಿಯು ಕೇವಲ ಜಾಗೃತಿಗಾಗಿ ಮಾತ್ರ. ಕೆಲವು ತಜ್ಞರು ಮತ್ತು ಅಧ್ಯಯನಗಳ ಆಧಾರದ ಮೇಲೆ ಈ ಅಂಶಗಳನ್ನು ನೀಡಲಾಗಿದೆ. ಇವುಗಳನ್ನು ಪಾಲಿಸುವುದು ಅಥವಾ ಬಿಡುವುದು ನಿಮ್ಮ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು. ಇದನ್ನು ಮಾಧ್ಯಮವು ದೃಢೀಕರಿಸುವುದಿಲ್ಲ.

