HomeLatest NewsBIG NEWS : ಕನ್ಯಾಪೊರೆ ಹರಿದಿದೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ದೂಷಿಸಲು ಆಗುವುದಿಲ್ಲ ; ಹೈಕೋರ್ಟ್...

BIG NEWS : ಕನ್ಯಾಪೊರೆ ಹರಿದಿದೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ದೂಷಿಸಲು ಆಗುವುದಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು

ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂತ್ರಸ್ತೆಯ ಸಾಕ್ಷ್ಯವು ಸಂಪೂರ್ಣವಾಗಿ ನಂಬಲರ್ಹವಾಗಿದ್ದರೆ, ಕೇವಲ ವೈದ್ಯಕೀಯ ವರದಿಯಲ್ಲಿ ಕನ್ಯಾಪೊರೆ ಹರಿದಿದೆ ಎಂಬ ಕಾರಣಕ್ಕೆ ಆರೋಪಿಗೆ ‘ಬೆನಿಫಿಟ್ ಆಫ್ ಡೌಟ್’ ನೀಡಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದರ ಜೊತೆಗೆ, “ಅತ್ಯಾಚಾರ ಎಂಬುದು ವೈದ್ಯಕೀಯ ಪದವಲ್ಲ, ಅದು ಕಾನೂನು ಸಂಬಂಧಿತ ಪದ” ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಮಾರು 44 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ ವಿಧಿಸಿದ್ದ ಮೂರು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ

1982ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ವ್ಯಾಪ್ತಿಯ ಒಂದು ಗ್ರಾಮದಲ್ಲಿ 15 ವರ್ಷದ ನಿರಕ್ಷರಾಸ್ಯ ಬಾಲಕಿ ಬೆಳಗ್ಗೆ ಹೊಲಕ್ಕೆ ತೆರಳಿದ್ದಾಗ ರಾಕೇಶ್ ಎಂಬಾತ ಮತ್ತೊಬ್ಬನೊಂದಿಗೆ ಸೇರಿ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿ ತೀವ್ರವಾಗಿ ಪ್ರತಿರೋಧಿಸಿದಾಗ ಆಕೆಯ ಮೇಲೆ ಹಲ್ಲೆಯೂ ನಡೆಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1983ರ ಮೇ ತಿಂಗಳಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ತಲಾ ಮೂರು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಕೇಶ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

ಆರೋಪಿಯ ಪರ ವಕೀಲರ ವಾದ

ಮೇಲ್ಮನವಿ ವಿಚಾರಣೆ ವೇಳೆ ಆರೋಪಿಯ ಪರ ವಕೀಲರು ವೈದ್ಯಕೀಯ ವರದಿಯನ್ನು ಉಲ್ಲೇಖಿಸಿ, ಸಂತ್ರಸ್ತೆಯ ಕನ್ಯಾಪೊರೆ ಈಗಾಗಲೇ ಹರಿದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರಿಂದ ಆಕೆ ಈ ಹಿಂದೆಯೇ ದೈಹಿಕ ಸಂಬಂಧ ಹೊಂದಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತನ್ನ ಕಕ್ಷಿದಾರ ಅತ್ಯಾಚಾರ ಎಸಗಿಲ್ಲ ಎಂಬುದಕ್ಕೆ ಇದನ್ನು ಆಧಾರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆರೋಪಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್

ಜಸ್ಟಿಸ್ ಸಂತೋಷ್ ರಾಯ್ ಅವರಿದ್ದ ಪೀಠವು ಆರೋಪಿಯ ಪರ ವಕೀಲರ ಈ ವಾದವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಸಂತ್ರಸ್ತೆಯ ವ್ಯಕ್ತಿತ್ವವನ್ನು ಪ್ರಶ್ನಿಸುವ ಪ್ರಯತ್ನವನ್ನು ನ್ಯಾಯಾಲಯ ಖಂಡಿಸಿತು. ಕನ್ಯಾಪೊರೆ ಹರಿಯಲು ಅನೇಕ ಕಾರಣಗಳಿರಬಹುದು ಎಂದು ನ್ಯಾಯಾಲಯ ತಿಳಿಸಿತು. ಕ್ರೀಡೆಗಳಲ್ಲಿ ಭಾಗವಹಿಸುವುದು, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಕುದುರೆ ಸವಾರಿ, ಕಠಿಣ ದೈಹಿಕ ಶ್ರಮ ಅಥವಾ ಆಕಸ್ಮಿಕ ಗಾಯಗಳಿಂದಲೂ ಕನ್ಯಾಪೊರೆ ಹರಿಯಬಹುದು ಎಂದು ನ್ಯಾಯಾಲಯ ಹೇಳಿದೆ.

ಇದರ ಜೊತೆಗೆ ಕೆಲ ಮಹಿಳೆಯರು ಜನ್ಮತಃ ಕನ್ಯಾಪೊರೆ ಇಲ್ಲದೆಯೇ ಜನಿಸುತ್ತಾರೆ. ಮತ್ತೆ ಕೆಲವರಲ್ಲಿ ಅದು ಹೆಚ್ಚು ಲವಚಿಕತೆಯನ್ನು ಹೊಂದಿರುತ್ತದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಆದ್ದರಿಂದ ಇಂತಹ ವೈದ್ಯಕೀಯ ಅಂಶಗಳನ್ನು ಆಧರಿಸಿ ಸಂತ್ರಸ್ತೆಯ ನಂಬಲರ್ಹ ಸಾಕ್ಷ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿ ಸಾರ್ವಜನಿಕರ ಕಣ್ಣಿಗೆ ಬೀಳದ ಸ್ಥಳಗಳಲ್ಲಿ ನಡೆಯುವುದರಿಂದ ಸ್ವತಂತ್ರ ದೃಷ್ಟಸಾಕ್ಷಿಗಳು ದೊರೆಯುವುದು ಅಪರೂಪ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಸಂತ್ರಸ್ತೆಯ ಕನ್ಯಾಪೊರೆ ಹರಿದಿದ್ದರೂ, ಆಕೆ ಅತ್ಯಾಚಾರ ನಡೆದಿದೆ ಎಂದು ನೀಡಿರುವ ಹೇಳಿಕೆ ನಂಬಲರ್ಹವಾಗಿದ್ದರೆ, ಕೇವಲ ಆ ಕಾರಣಕ್ಕೆ ಆರೋಪಿಗೆ ಅನುಕೂಲ ಕಲ್ಪಿಸಲು ಸಾಧ್ಯವಿಲ್ಲ. ಅತ್ಯಾಚಾರ ಎಂಬುದು ಕಾನೂನು ಪದ, ವೈದ್ಯಕೀಯ ಪದವಲ್ಲ. ವೈದ್ಯರ ಅಭಿಪ್ರಾಯವನ್ನೇ ಆಧಾರವನ್ನಾಗಿ ಮಾಡಿಕೊಂಡು ಆರೋಪಿಯು ಅಪರಾಧ ಮಾಡಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಜಾಮೀನು ರದ್ದು, 10 ದಿನಗಳಲ್ಲಿ ಶರಣಾಗಲು ಆದೇಶ

ಇಲ್ಲಿಯವರೆಗೆ ಜಾಮೀನಿನ ಮೇಲೆ ಹೊರಗಿದ್ದ ಆರೋಪಿ ರಾಕೇಶ್‌ನ ಜಾಮೀನು ಬಾಂಡ್‌ಗಳನ್ನು ಹೈಕೋರ್ಟ್ ತಕ್ಷಣದಿಂದಲೇ ರದ್ದುಪಡಿಸಿದೆ. ಉಳಿದ ಶಿಕ್ಷೆಯ ಅವಧಿಯನ್ನು ಅನುಭವಿಸಲು ಮುಂದಿನ 10 ದಿನಗಳೊಳಗೆ ಟ್ರಯಲ್ ಕೋರ್ಟ್ ಮುಂದೆ ಶರಣಾಗುವಂತೆ ಆದೇಶ ನೀಡಿ, ಮೇಲ್ಮನವಿಯನ್ನು ವಜಾಗೊಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular