ಚಿಕ್ಕಮಗಳೂರು : ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದ ಕಳಸ, ಬಾಳೆಹೊನ್ನೂರು ಹಾಗೂ ಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಡುತ್ತಿದ್ದ ಲಘು ವಿಮಾನ ಸಾರ್ವಜನಿಕರಲ್ಲಿ ಭಾರಿ ಕುತೂಹಲ ಹಾಗೂ ಆತಂಕ ಮೂಡಿಸಿತ್ತು. ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದು, ಇದು ಕೇಂದ್ರ ಸರ್ಕಾರದ ಅಧಿಕೃತ ಖನಿಜ ಸಮೀಕ್ಷೆ ಎಂದು ತಿಳಿಸಿದ್ದಾರೆ.
ಏನಿದು ಸಮೀಕ್ಷೆ?
ಭಾರತ ಸರ್ಕಾರದ ಗುತ್ತಿಗೆ ಪಡೆದಿರುವ ‘ಎಕ್ಸ್-ಕ್ಯಾಲಿಬರ್ ಏವಿಯೇಷನ್’ ಸಂಸ್ಥೆಯು ಭೂಮಿಯ ಅಡಿಯಲ್ಲಿರುವ ಅಮೂಲ್ಯ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು ಈ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ. ಇದಕ್ಕಾಗಿ ಅತ್ಯಾಧುನಿಕ ‘ಮ್ಯಾಗ್ನೆಟಿಕ್ ಗ್ರೇಡಿಯೋ ಮೀಟರ್’ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ನಿಖರ ಮಾಹಿತಿ ಸಂಗ್ರಹಿಸಲು ವಿಮಾನವು ತೀರಾ ಕೆಳಮಟ್ಟದಲ್ಲಿ ಹಾರಾಡುವುದು ಅನಿವಾರ್ಯವಾಗಿದೆ.
ಜುಲೈ ಅಂತ್ಯದವರೆಗೆ ಹಾರಾಟ: ಈ ಸಮೀಕ್ಷಾ ಕಾರ್ಯವು ಜುಲೈ 31, 2026 ರವರೆಗೆ ಮುಂದುವರಿಯಲಿದ್ದು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವಿಮಾನಗಳು ಸಂಚರಿಸಲಿವೆ. ಸ್ಥಳೀಯ ಪೊಲೀಸ್ ಇಲಾಖೆಗೆ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.


