ಬೆಳಗಾವಿ: ಸಿಪಿಐ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಬಡ್ತಿ ಪಡೆದ ದಿನವೇ ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ದಳ(SDRF) ಬೆಳಗಾವಿ ಘಟಕದ ಸಿಪಿಐ ಆಗಿದ್ದ ಶ್ರೀಶೈಲ ಚೌಗಲೆ(37) ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದ ಶ್ರೀಶೈಲ ಚೌಗಲೆ ಕಳೆದ ವರ್ಷ ನವೆಂಬರ್ 1ರಂದು ಮುಖ್ಯಮಂತ್ರಿ ಪದಕ ಪಡೆದಿದ್ದರು.
ಬುಧವಾರ ಬಡ್ತಿ ಪಡೆದ ಅವರು ಗುರುವಾರ ಕೌನ್ಸೆಲಿಂಗ್ ಗೆ ಹಾಜರಾಗಬೇಕಿತ್ತು. ಅಥಣಿ ತಾಲೂಕಿನ ಕವಟಕೊಪ್ಪ ಮೂಲದ ಶ್ರೀಶೈಲ ಬೆಂಗಳೂರು, ಶಿಗ್ಗಾಂವಿಯಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಮೂರು ವರ್ಷದಿಂದ ಬೆಳಗಾವಿಯ SDRF ನಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಬುಧವಾರ ರಾತ್ರಿ ಊಟ ಮಾಡಿ ತಮ್ಮ ಕೋಣೆಗೆ ತೆರಳಿದ ಅವರು ಮಲಗಿರಬಹುದು ಎಂದು ಕುಟುಂಬದವರು ಭಾವಿಸಿದ್ದಾರೆ. ಬಹಳ ಸಮಯದವರೆಗೆ ಬಾಗಿಲು ತೆರೆಯದಿದ್ದಾಗ ಪತ್ನಿ ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಚಿಲಕ ಹಾಕಿದ್ದ ಕಾರಣ ಸಂಶಯಗೊಂಡ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಶ್ರೀಶೈಲ ಚೌಗಲೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆದಾಗಲೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಬೆಳಗಾವಿಯ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗಿದ್ದು, ಅವರ ಸಾವಿನ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ.

