ಬೆಂಗಳೂರು: ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ. ಪೂರ್ವಭಾವಿಯಾಗಿ ಸೋಮವಾರ ಮಧ್ಯಾಹ್ನ 12:30ಕ್ಕೆ ಅತ್ತಿಬೆಲೆ ಗಡಿ ಬಂದ್ ಮಾಡಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಸುವ ಸಂಬಂಧ ಜಾಗೃತಿ ಮೂಡಿಸಲು ಹಾಗೂ ಮಹದಾಯಿ ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆ ಜಾರಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭಾನುವಾರ ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಗಿದೆ.
ಒಕ್ಕೂಟದ ಕಾರ್ಯಕರ್ತರು ಬಿಡದಿ ಉಪನಗರ ಬೇಡ, ಮೇಕೆದಾಟು ಯೋಜನೆ ಆಗಬೇಕು, ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣ ಮಂಡಳಿ ತೀರ್ಪು ತಿರಸ್ಕರಿಸಬೇಕು, ಮಹದಾಯಿ ಕಳಸ ಬಂಡೂರಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಆ. 13 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅದರ ಪೂರ್ವಭಾವಿಯಾಗಿ ಆಗಸ್ಟ್ 10ರಂದು ಸೋಮವಾರ ಮಧ್ಯಾಹ್ನ 12:30ಕ್ಕೆ ಅತ್ತಿಬೆಲೆ ಗಡಿ ಬಂದ್ ಮಾಡಲಾಗುವುದು. ಕನ್ನಡ ಒಕ್ಕೂಟದಲ್ಲಿರುವ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

