ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ರಾಜಕಾರಣಿ ವಿಜಯ್ ಸದ್ಯ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಕಳೆದ 27 ವರ್ಷಗಳಿಂದ ಸುಂದರ ದಾಂಪತ್ಯ ನಡೆಸುತ್ತಿದ್ದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸೋಮಲಿಂಗಂ ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಅತೀವ ಆತಂಕ ಮೂಡಿಸಿದೆ.
ಸಂಗೀತಾ ಅವರು ಸಲ್ಲಿಸಿದ್ದಾರೆನ್ನಲಾದ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ವಿಜಯ್ ಅವರಿಗೆ ಮತ್ತೊಬ್ಬ ನಟಿಯ ಜೊತೆ ಇರುವ ಸಂಬಂಧವೇ ಈ ಸಂಸಾರದಲ್ಲಿ ಬಿರುಕು ಮೂಡಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ವಿದೇಶ ಪ್ರವಾಸ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿಜಯ್ ಆ ನಟಿಯ ಜೊತೆ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕುಟುಂಬದ ನೆಮ್ಮದಿ ಕೆಡಿಸಿದೆ ಎಂದು ಸಂಗೀತಾ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ವಿವಾದವು ನ್ಯಾಯಾಲಯದಲ್ಲಿ ದೀರ್ಘಕಾಲ ಎಳೆಯಬಾರದು ಮತ್ತು ಕುಟುಂಬದ ಗೌರವಕ್ಕೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ನಟ ವಿಜಯ್ ಅವರು ಒಮ್ಮತದ ಒಪ್ಪಂದಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ಸಂಗೀತಾ ಮತ್ತು ತಮ್ಮ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಸುಮಾರು 250 ಕೋಟಿ ರೂಪಾಯಿ ಭರಣ ನೀಡಲು ವಿಜಯ್ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಮತ್ತು ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಈ ಜೋಡಿ ನಾರ್ವೆ ದೇಶದಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ರಾಜಕೀಯ ನಾಯಕರು ಕೂಡ ಈ ವಿಚಾರವಾಗಿ ವಿಜಯ್ ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ವಿಜಯ್ ಅಥವಾ ಸಂಗೀತಾ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ.
1999 ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ಸಂಬಂಧ ಈ ಹಂತಕ್ಕೆ ಬಂದು ತಲುಪಿರುವುದು ಮಾತ್ರ ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

