HomeKarnatakaಬೆಂಗಳೂರು ನಗರದ ಅತಿ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್‌, ಯೋಜನೆ ವಿವರ

ಬೆಂಗಳೂರು ನಗರದ ಅತಿ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್‌, ಯೋಜನೆ ವಿವರ

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆ ರೂಪಿಸಲಾಗುತ್ತಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ  ಓವರ್ ರಾಗಿಗುಡ್ಡ–ಸಿಲ್ಕ್ ಬೋರ್ಡ್ ನಡುವೆ ನಿರ್ಮಾಣ ಮಾಡಲಾಗಿದೆ. ಇದು ಇನ್ನೂ ಎರಡು ಬದಿಯ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ.

ಈಗ ಬಿಎಂಆರ್‌ಸಿಎಲ್ ಬೆಂಗಳೂರು ನಗರದ ಅತ್ಯಂತ ಉದ್ದದ ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆಗೆ ಟೆಂಡರ್ ಕರೆದಿದೆ. ನಮ್ಮ ಮೆಟ್ರೋ ಹಂತ-3 ಯೋಜನೆಯಡಿ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದ್ದು, ಮೇಲೆ ಮೆಟ್ರೋ, ಕೆಳಗೆ ವಾಹನಗಳು ಸಂಚಾರ ನಡೆಸಬಹುದು.

ನಮ್ಮ ಮೆಟ್ರೋ ಹಂತ-3 44.6 ಕಿ.ಮೀ. ಯೋಜನೆಯಾಗಿದೆ. ಇದು ಎರಡು ಕಾರಿಡಾರ್‌ಗಳನ್ನು ಹೊಂದಿದ್ದು, ಜೆಪಿ ನಗರ 4ನೇ ಹಂತ-ಕೆಂಪಾಪುರ ವಯಾ ಔಟರ್ ರಿಂಗ್ ರೋಡ್ (32.1 ಕಿ.ಮೀ.) ಮತ್ತು ಹೊಸಹಳ್ಳಿ-ಕಡಬಗೆರೆ (12.5 ಕಿ.ಮೀ.) ವಯಾ ಮಾಗಡಿ ರೋಡ್ ಸಂಪರ್ಕಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೆಟ್ರೋ ಯೋಜನೆಗೆ ಬಿಎಂಆರ್‌ಸಿಎಲ್ 3 ಹಂತದ ಟೆಂಡರ್ ಕರೆದಿದೆ. ಮೊದಲ ಪ್ಯಾಕೇಜ್‌ ಜೆ.ಪಿ.ನಗರ 4ನೇ ಹಂತ-ಕಾಮಾಕ್ಯ ಜಂಕ್ಷನ್ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಸೇರಿದೆ. ಇದರಲ್ಲಿ ರ‍್ಯಾಂಪ್ ನಿರ್ಮಾಣ, ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ ಮತ್ತು ಕಾಮಾಕ್ಯದಲ್ಲಿ ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿದೆ.

ಈ ಯೋಜನೆಯ ವೆಚ್ಚ ಸುಮಾರು 1375 ಕೋಟಿ ಎಂದು ಅಂದಾಜಿಸಲಾಗಿದ್ದು, ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಅನುಕೂಲವಾಗುವಂತೆ  ಡಾಲರ್ಸ್‌ ಕಾಲೋನಿಯಲ್ಲಿರುವ ಫ್ಲೈ ಓವರ್ ಕೆಡವಲಾಗುತ್ತದೆ.

2ನೇ ಹಂತದ ಟೆಂಡರ್: 2ನೇ ಹಂತದ ಟೆಂಡರ್‌ನಲ್ಲಿ 5 ಕಿ.ಮೀ. ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಇದನ್ನು ನಾಗರಭಾವಿ ಸರ್ಕಲ್ ತನಕ ನಿರ್ಮಿಸಲಾಗುತ್ತದೆ. ಹೊಸಕೆರೆಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ, ನಾಗರಭಾವಿ ಸರ್ಕಲ್‌ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಯೋಜನೆಯ ವೆಚ್ಚ ಸುಮಾರು 1396 ಕೋಟಿ.

3ನೇ ಹಂತದಲ್ಲಿ ಸುಂಕದಕಟ್ಟೆ ತನಕ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ವಿನಾಯಕ ಲೇಔಟ್, ಪಾಪರೆಡ್ಡಿ ಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ನಗರದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮತ್ತು ಸುಂಕದಕಟ್ಟೆಯ ಪ್ರಸ್ತಾವಿತ ಮೆಟ್ರೋ ಡಿಪೋಗೆ ರ‍್ಯಾಂಪ್ ನಿರ್ಮಾಣ ಸೇರಿದೆ. ಯೋಜನೆ ವೆಚ್ಚ ಸುಮಾರು 1415 ಕೋಟಿ ರೂ.ಗಳು.

ಮೊದಲು ಈ ಮೆಟ್ರೋ ಮಾರ್ಗವನ್ನು ಪೀಣ್ಯಕ್ಕೆ ಸಂಪರ್ಕಿಸಲು ಯೋಜನೆ ವಿನ್ಯಾಸ ರೂಪಿಸಲಾಗಿತ್ತು. ಕಳೆದ ವರ್ಷ ಅದನ್ನು ಗೊರಗುಂಟೆಪಾಳ್ಯಕ್ಕೆ ಸಂಪರ್ಕಿಸಲಾಗುತ್ತದೆ ಎಂದು ವಿನ್ಯಾಸವನ್ನು ಬದಲಾವಣೆ ಮಾಡಲಾಗಿತ್ತು.

ಇದು ನಮ್ಮ ಮೆಟ್ರೋ ಕಿತ್ತಲೆ ಮಾರ್ಗವಾಗಿದ್ದು, 2024ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದ್ದು, ಈಗ ಟೆಂಡರ್ ಕರೆಯಲಾಗಿದೆ. ಒಟ್ಟು ಡಬಲ್ ಡೆಕ್ಕರ್ ಫ್ಲೈ ಓವರ್ 40 ಕಿ.ಮೀ. ಎಂದು ಅಂದಾಜಿಸಲಾಗಿದೆ.

ಈ ಯೋಜನೆಗೆ ಈಗ ಟೆಂಡರ್ ಕರೆಯಲಾಗಿದೆ. ಟೆಂಡರ್ ಅಂತಿಮಗೊಂಡು ಕಾಮಗಾರಿ ಪ್ರಾರಂಭವಾಗಲು ಸುಮಾರು ಒಂದೂವರೆ ವರ್ಷಗಳು ಬೇಕು ಎಂದು ಅಂದಾಜಿಸಲಾಗಿದೆ. ಕಾಮಗಾರಿ ಪ್ರಾರಂಭವಾದ ಮೇಲೆ ಅದನ್ನು ಪೂರ್ಣಗೊಳಿಸಲು ಎಷ್ಟು ಗಡುವು ನೀಡಲಾಗುತ್ತದೆ? ಎಂಬುದು ಜನರ ಪ್ರಶ್ನೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular