ಪಟ್ನಾ: ಬಿಹಾರದ ಪಟ್ನಾದಲ್ಲಿರುವ ಖ್ಯಾತ ‘ಪಾರಸ್ ಆಸ್ಪತ್ರೆ’ಯ (Paras Hospital) ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಸಣ್ಣ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ 15 ವರ್ಷದ ಬಾಲಕ ಮೃತಪಟ್ಟಿದ್ದು, ವೈದ್ಯರು ಆತನ ಕಿಡ್ನಿಗಳನ್ನು ತೆಗೆದಿದ್ದಾರೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ಘಟನೆಯ ವಿವರ:
15 ವರ್ಷದ ಬಾಲಕನಿಗೆ ಸಣ್ಣ ಅಪಘಾತವಾಗಿ ಗಾಯಗೊಂಡಿದ್ದರಿಂದ ಆತನನ್ನು ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ತಿಳಿಸಿದೆ. ಬಾಲಕನ ಮೃತದೇಹವನ್ನು ನೋಡಿದ ಪೋಷಕರಿಗೆ ಆತನ ಕಿಡ್ನಿ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿದಂತಹ ಗುರುತುಗಳು ಕಂಡುಬಂದಿವೆ. ಇದರಿಂದ ಆಕ್ರೋಶಗೊಂಡ ಪೋಷಕರು, ನನ್ನ ಮಗನ ಕಿಡ್ನಿಗಳನ್ನು ಹೊರತೆಗೆಯಲಾಗಿದೆ ಎಂದು ಕಣ್ಣೀರು ಹಾಕುತ್ತಾ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪೋಷಕರ ಆಕ್ರೋಶ ಮತ್ತು ತನಿಖೆ: ಆಸ್ಪತ್ರೆಯ ಆವರಣದಲ್ಲಿ ಪೋಷಕರು ಮತ್ತು ಸಂಬಂಧಿಕರು ಭಾರಿ ಹಂಗಾಮೆ ನಡೆಸಿದ್ದು, ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಕೇವಲ ಗಾಯದ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಲಕನ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ದೇಹದ ಮೇಲೆ ಕಿಡ್ನಿ ತೆಗೆದಿರುವ ಸ್ಪಷ್ಟ ಗುರುತುಗಳಿವೆ ಎಂದು ಪೋಷಕರು ದೂರುತ್ತಿದ್ದಾರೆ.ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

