HomeKarnatakaರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳ ಬಲಪಡಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳ ಬಲಪಡಿಸಲು ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಸುಮಾರು 46 ಸಾವಿರ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಹಾಗೂ ‘ಕರ್ನಾಟಕ ಪಬ್ಲಿಕ್ ಶಾಲೆ(KPS)’ಗಳನ್ನು ಮಾದರಿಯನ್ನಾಗಿ ರೂಪಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಖುದ್ದು ಭೇಟಿಯಾಗಿ ಶುಭ ಕೋರುವ ಉದ್ದೇಶದಿಂದ ಇಂದು ಬೆಂಗಳೂರಿನ ಕೆಲವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದ ಅವರು, ​ಅನೇಕ ಶಾಲೆಗಳಲ್ಲಿ ಶಿಕ್ಷಕರೇ ಮುಂಚೂಣಿಯಲ್ಲಿ ನಿಂತು ಸಂಸ್ಥೆಯನ್ನು ಮುನ್ನಡೆಸುತ್ತಿರುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ನಾಡಿನ ಸುಂದರ ಭವಿಷ್ಯ ರೂಪಿಸುತ್ತಿರುವ ನಮ್ಮ ಪ್ರತಿಯೊಬ್ಬ ಶಿಕ್ಷಕರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ. ಸರ್ಕಾರ ಸದಾ ನಿಮ್ಮ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

​ಮೊದಲಿಗೆ ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಗೆ ತೆರಳಿ, ಅಲ್ಲಿನ ಶಿಕ್ಷಕರಿಗೆ ಗುಲಾಬಿ ನೀಡಿ ಶುಭಾಶಯ ತಿಳಿಸಿದಾಗ ಅವರ ಮುಖದಲ್ಲಿ ಮೂಡಿದ ನಗು ನನ್ನಲ್ಲಿ ಅಪಾರ ಸಂತಸ ತಂದಿತು. ಶಿಕ್ಷಣ ಮತ್ತು ಶಿಕ್ಷಕರ ಮಹತ್ವದ ಬಗ್ಗೆ ನಮ್ಮ ಶಾಲೆಯ ಮಕ್ಕಳು ಆಡಿದ ಮಾತುಗಳು ಮನಸ್ಸಿಗೆ ತುಂಬ ಹೆಮ್ಮೆ ತರಿಸಿದವು. ನಮ್ಮ ಸರ್ಕಾರಿ ಶಾಲಾ ಮಕ್ಕಳು, ಸೌಲಭ್ಯಗಳು ಯಾರಿಗೂ ಕಡಿಮೆಯಿಲ್ಲ; ವ್ಯವಸ್ಥೆಯ ಬಗ್ಗೆ ಕೇವಲ ನಕಾರಾತ್ಮಕವಾಗಿ ಮಾತನಾಡುವವರು ಇಂತಹ ಶಾಲೆಗಳನ್ನು ಖಂಡಿತ ಕಣ್ಣಾರೆ ನೋಡಬೇಕು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

​ಬಳಿಕ ಆರ್.ಕೆ. ಹೆಗ್ಗಡೆ ನಗರದ ಸರ್ಕಾರಿ ಉರ್ದು-ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೂ ಭೇಟಿ ನೀಡಿ ಶಿಕ್ಷಕರಿಗೆ ಶುಭ ಕೋರಿದೆ. ಈ ದಿನವನ್ನು ನಮ್ಮ ಶಿಕ್ಷಕರೊಂದಿಗೆ ಕಳೆದದ್ದು ಅತ್ಯಂತ ಸಾರ್ಥಕವೆನಿಸಿತು. ​ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಶಿಕ್ಷಕರ ಅಮೂಲ್ಯ ಸೇವೆಗೆ ಗೌರವ

ಶಿಕ್ಷಕರ ಅಮೂಲ್ಯ ಸೇವೆಯನ್ನು ಗೌರವಿಸಲು, 2026ರ ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಶಿಕ್ಷಕರಿಗೆ ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (Teacher) ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಬಳಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಶಿಕ್ಷಕರು ತಮ್ಮ ಹೆಸರುಗಳ ಮುಂದೆ ಹೆಮ್ಮೆಯಿಂದ “Tr” (Teacher) ಎಂಬ ಶೀರ್ಷಿಕೆಯನ್ನುಬಳಸಬಹುದಾಗಿರುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನವಷ್ಟೇ ಅಲ್ಲದೆ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಸಾಂವಿಧಾನಿಕ ತತ್ವಗಳನ್ನು ಕಲಿಸುವಲ್ಲಿ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಒಬ್ಬ ವೈದ್ಯ, ಇಂಜಿನಿಯರ್, ರೈತ, ವಿಜ್ಞಾನಿ ಹಾಗೂ ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಯಶಸ್ಸಿನ ಹಿಂದೆ ಒಬ್ಬ ಶಿಕ್ಷಕರ ಮಾರ್ಗದರ್ಶನವಿರುತ್ತದೆ.

ರಾಜ್ಯದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರು ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಗೌರವಿಸುವ ಸಲುವಾಗಿ, ರಾಜ್ಯ ಸರ್ಕಾರವು ಈ ತೀರ್ಮಾನ ತೆಗೆದುಕೊಂಡಿದೆ. ಈ ನಿರ್ಧಾರಕ್ಕೆ ಅನುಮತಿ ನೀಡಿ, ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಇನ್ನು ಮುಂದೆ ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (Teacher) ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಹೆಮ್ಮೆಯಿಂದ ಬಳಸಬಹುದು. ಇದು ಕೇವಲ ಶೀರ್ಷಿಕೆಯಲ್ಲ, ಸಮಾಜ ಶಿಕ್ಷಕರ ಜೀವಿತಾವಧಿಯ ಸೇವೆಗೆ ಅರ್ಪಿಸುತ್ತಿರುವ ಗೌರವ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular