ಮೈಸೂರು: ಜನಗಣತಿ ವೇಳೆ ಸರ್ಕಾರಿ ಶಾಲೆ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೆಆರ್ ನಗರದ ಕುವೆಂಪು ಬಡಾವಣೆಯಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿಯ ಸಿ.ಕೆ. ರಂಗನಾಥ್(53) ಮೃತಪಟ್ಟವರು. ಅವರು ಪತ್ನಿ, ಪುತ್ರ, ಪುತ್ರಿಯಯನ್ನು ಅಗಲಿದ್ದಾರೆ. ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕರಾಗಿ ರಂಗನಾಥ್ ಕಾರ್ಯನಿರ್ವಹಿಸುತ್ತಿದ್ದು, ಜನಗಣತಿ ಕಾರ್ಯಕ್ಕೆ ಅವರನ್ನು ನಿಯೋಜಿಸಲಾಗಿತ್ತು.
ಕುವೆಂಪು ಬಡಾವಣೆಯಲ್ಲಿ ಜನಗಣತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವರಿಗೆ ಹೃದಯಘಾತವಾಗಿದೆ. ಕೂಡಲೇ ಸ್ಥಳೀಯರು ಅವರನ್ನು ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೊಳಲು ರಸ್ತೆಯ ಕುವೆಂಪು ಬಡಾವಣೆಯಲ್ಲಿ ರಂಗನಾಥ ವಾಸವಾಗಿದ್ದರು. ಅವರ ಸ್ವಗ್ರಾಮ ಚಿಕ್ಕನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಮಾಜಿ ಸಚಿವ ಸಾ.ರಾ. ಮಹೇಶ್ ಸಂತಾಪ ಸೂಚಿಸಿದ್ದಾರೆ. ಸರಳ ಸಜ್ಜನಿಕೆಯ ಶಿಕ್ಷಕರಾಗಿದ್ದ ಸಿ.ಕೆ. ರಂಗನಾಥ್ ವೃತ್ತಿಯಲ್ಲಿ ಕರ್ತವ್ಯ ನಿಷ್ಠೆ ಹೊಂದಿದ್ದರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

