ಚೆನ್ನೈ: ತಮಿಳುನಾಡಿನಲ್ಲಿ ದಳಪತಿ ವಿಜಯ್ ಸರ್ಕಾರ ರಚನೆಗೆ ಕ್ಷಣಗಣಣೆ ಆರಂಭವಾಗಿದೆ. ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷ ಬೇಷರತ್ ಬೆಂಬಲ ಘೋಷಿಸಿದೆ. ಮತ್ತೊಂದೆಡೆ ಮುಸ್ಲಿಂ ಲೀಗ್ ಕೂಡ ಬೆಂಬಲ ನೀಡಿದೆ. ಈ ಮೂಲಕ ನಟ ವಿಜಯ್ ಸರ್ಕಾರ ರಚನೆಗೆ ಅಗತ್ಯವಿರುವ 118 ಸಂಖ್ಯಾ ಬಲವನ್ನು ದಾಟಿದ್ದಾರೆ.
ವಿಸಿಕೆ ಸಂಸ್ಥಾಪಕ ಮತ್ತು ಲೋಕಸಭಾ ಸಂಸದ ಥೋಲ್ ತಿರುಮಾವಲವನ್, ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದರು. ಟಿವಿಕೆ ಹಾಗೂ ವಿಸಿಕೆ ನಾಯಕರ ಸಭೆ ಬಳಿಕ ಹೊರಬಂದ ಆಧವ್, ತಮ್ಮ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಜಯ್ ಅವರನ್ನು ಭೇಟಿ ಮಾಡಲು ಹೊರಡುವ ಮುನ್ನ ಮಾಧ್ಯಮಗಳಿಗೆ ಬೆಂಬಲ ಪತ್ರವನ್ನು ಪ್ರದರ್ಶಿಸಿದರು.
ಈ ಮೂಲಕ ವಿಜಯ್ ಸರ್ಕಾರ ರಚನೆಗೆ ಕಳೆದ ನಾಲ್ಕೈದು ದಿನಗಳಿಂದ ಉಂಟಾಗಿದ್ದ ಅಡ್ಡಿ, ಆತಂಕಗಳು ನಿವಾರಣೆಯಾದಂತಾಗಿವೆ. 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ ಈಗ 118 ಶಾಸಕರ ಬೆಂಬಲವನ್ನು ಪಡೆದುಕೊಂಡಿದೆ. ತಮಿಳುನಾಡು ರಾಜ್ಯಪಾಲರಿಗೆ ವಿಸಿಕೆ ಕಳುಹಿಸಿದ ಪತ್ರದ ಪ್ರಕಾರ, ಪಕ್ಷದ ಅಧ್ಯಕರು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಉದ್ದೇಶಕ್ಕಾಗಿ ಟಿವಿಕೆ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಂಬಿಕೆ ಇಟ್ಟಿರುವುದಾಗಿ ಹಾಗೂ ತಮ್ಮ ಇಬ್ಬರು ಶಾಸಕರು ಬೆಂಬಲವನ್ನು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಜನರಿಗೆ ಸ್ಥಿರ ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಖಚಿತಪಡಿಸಿಕೊಳ್ಳುವ ಹಿತಾಸಕ್ತಿಯಿಂದ ಬೆಂಬಲವನ್ನು ತಿಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯಪಾಲರು ತಮ್ಮ ಬೇಷರತ್ತಾದ ಬೆಂಬಲವನ್ನು ಮಾನ್ಯ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ವಿಜಯ್ ಅವರ ಟಿವಿಕೆ ಪಕ್ಷ 107, ಕಾಂಗ್ರೆಸ್ 5, ಸಿಪಿಐ, 2, ಸಿಪಿಐ(ಎಂ), ವಿಸಿಕೆ 2 ಹಾಗೂ ಮುಸ್ಲಿಂ ಲೀಗ್ 2 ಒಟ್ಟು 121 ಶಾಸಕರ ಬಲವನ್ನು ಹೊಂದಿದ್ದು, ಶೀಘ್ರದಲ್ಲಿಯೇ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ವಿಜಯ್ ಹಕ್ಕು ಮಂಡಿಸಲಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಯುಗಾರಂಭವಾಗಲಿದೆ.

