HomeIndiaBig Breaking: ಭಾಷಣ ಓದದೇ ವಿಧಾನಸಭೆಯಿಂದ ರಾಜ್ಯಪಾಲರ ಸಭಾತ್ಯಾಗ!

Big Breaking: ಭಾಷಣ ಓದದೇ ವಿಧಾನಸಭೆಯಿಂದ ರಾಜ್ಯಪಾಲರ ಸಭಾತ್ಯಾಗ!

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಜಟಾಪಟಿ ಮುಂದುವರೆದಿದೆ. ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ್ದ ರಾಜ್ಯಪಾಲರು ಭಾಷಣ ಓದದೇ ವಾಪಸ್ ಹೋಗಿದ್ದಾರೆ.

ಮಂಗಳವಾರ ರಾಜ್ಯಪಾಲ ಆರ್‌.ಎನ್‌.ರವಿ ತಮಿಳುನಾಡು ವಿಧಾನಸಭೆ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದರು. ಆದರೆ ರಾಷ್ಟ್ರಗೀತೆ ಮುಕ್ತಾಯವಾದ ಬಳಿಕ ಅವರು ತಮ್ಮ ಭಾಷಣವನ್ನು ಓದದೇ ವಿಧಾನಸಭೆಯಿಂದ ವಾಪಸ್ ಆದರು.

ತಮಿಳುನಾಡಿನ ಡಿಎಂಕೆ & ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಜಟಾಪಟಿ ಇದೇ ಮೊದಲಲ್ಲ. ಆದರೆ ಈ ವರ್ಷದ ಮೊದಲ ಅಧಿವೇಶನದಲ್ಲಿಯೇ ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣ ಮಾಡದೇ ಸಭಾತ್ಯಾಗ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ ವರ್ಷದ ಮೊದಲ ಅಧಿವೇಶನದಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಇದೊಂದು ಸಾಂಪ್ರದಾಯಿಕ ಭಾಷಣವಾಗಿರುತ್ತದೆ. ಆದರೆ ಸಂಪ್ರದಾಯವನ್ನು ಪಾಲನೆ ಮಾಡದೇ ರಾಜ್ಯಪಾಲರು ತಮಿಳುನಾಡು ವಿಧಾನಸಭೆಯಿಂದ ಹೊರನಡೆದರು. ಇದು ರಾಜಭವನ ಮತ್ತು ಸರ್ಕಾರದ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ.

ವಿಧಾನಸಭೆ ಕಾರ್ಯಕಲಾಪಗಳು ಪ್ರಾರಂಭವಾಗುತ್ತಿದ್ದಂತೆ, ಸ್ಪೀಕರ್ ಎಂ.ಅಪ್ಪಾವು ರಾಜ್ಯಪಾಲರು ಸ್ಥಾಪಿತ ನಿಯಮಗಳು ಮತ್ತು ಸಂಪ್ರದಾಯಗಳಿಗೆ ಬದ್ಧವಾಗಿರಬೇಕು ಮತ್ತು ರಾಜ್ಯ ಸರ್ಕಾರವು ಅನುಮೋದಿಸಿದ ಸಾಂಪ್ರದಾಯಿಕ ಭಾಷಣವನ್ನು ಮಾತ್ರ ಓದಬೇಕೆಂದು ಒತ್ತಾಯಿಸಿದರು.

ಆಡಳಿತ ಪಕ್ಷದ ಸದಸ್ಯರ ಆಕ್ಷೇಪಣೆಗಳ ನಡುವೆ ಮಧ್ಯಪ್ರವೇಶಿಸಿದ ಸ್ಪೀಕರ್, ಶಾಸಕಾಂಗದ ಕಾರ್ಯವಿಧಾನದ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತಾ, ಸಭೆಯಲ್ಲಿ ಶಾಸಕರು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಬಹುದು, ಬೇರೆ ಯಾರೂ ಅಲ್ಲ ಎಂದು ಹೇಳಿದರು.

ರಾಜ್ಯಪಾಲರು ಪ್ರತಿಕ್ರಿಯೆ: ರಾಜ್ಯಪಾಲ ಆರ್‌.ಎನ್‌.ರವಿ ಸದನದ ಬಾವಿಯಿಂದಲೇ ಇದಕ್ಕೆ ಪ್ರತಿಕ್ರಿಯಿಸಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ್ದು ದುರದೃಷ್ಟಕರ ಎಂದು ಹೇಳಿದರು. ಕಲಾಪ ನಡೆಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ನೀಡಬೇಕಾದ ಗೌರವವನ್ನು ನೀಡಲಾಗಿಲ್ಲ” ಎಂದು ಹೇಳಿದರು.

ಇದರ ಬಳಿಕ ರಾಜ್ಯಪಾಲರು ಭಾಷಣವನ್ನು ಪೂರ್ಣಗೊಳಿಸದೆ ಅಥವಾ ಔಪಚಾರಿಕವಾಗಿ ಮಂಡಿಸದೆ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು. ಈ ಬೆಳವಣಿಗೆ ಬಳಿಕ ತಮಿಳುನಾಡು ರಾಜಭವನವು ಈ ಸಭಾತ್ಯಾಗದ ಹಿಂದಿನ ಕಾರಣಗಳನ್ನು ವಿವರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿತು.

ಈ ಹೇಳಿಕೆಯಲ್ಲಿ ರಾಜ್ಯಪಾಲರ ಮೈಕ್‌ ಅನ್ನು ಪದೇ ಪದೇ ಆಫ್ ಮಾಡಲಾಗಿತ್ತು ಮತ್ತು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಜಭವನದ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.

ಸರ್ಕಾರದ ಅನುಮೋದಿತ ಸಿದ್ಧಪಡಿಸಿದ ಭಾಷಣವು ಅನೇಕ ಆಧಾರರಹಿತ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ಒಳಗೊಂಡಿತ್ತು ಮತ್ತು ರಾಜ್ಯಪಾಲರು ಎತ್ತಿದ ಹಲವಾರು ಕಳವಳಕಾರಿ ವಿಷಯಗಳು ಭಾಷಣದ ಪಠ್ಯದಲ್ಲಿ ಪ್ರತಿಫಲಿಸಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯಪಾಲ ಆರ್‌.ಎನ್‌.ರವಿ ಭಾಷಣ ಓದದೇ ವಿಧಾನಸಭೆಯಿಂದ ಹೊರ ನಡೆಯುತ್ತಿರುವುದು ಇದು 3ನೇ ಬಾರಿ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯಪಾಲರ ಈ ನಡೆಯುನ್ನು ಟೀಕಿಸಿದ್ದಾರೆ.

ಎಂ.ಕೆ.ಸ್ಟಾಲಿನ್ ಮಾತನಾಡಿ, “ಅಧಿವೇಶನದಿಂದ ರಾಜ್ಯಪಾಲ ಆರ್‌.ಎನ್‌.ರವಿ ಹೊರ ನಡೆದಿರುವುದು ಸಂಪ್ರದಾಯದ ಉಲ್ಲಂಘನೆಯಾಗಿದೆ. ಉದ್ದೇಶಪೂರ್ವಕವಾಗಿಯೇ ರಾಜ್ಯಪಾಲರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ಸದನವನ್ನು ಅವಮಾನ ಮಾಡಿದಂತೆ” ಎಂದು ಹೇಳಿದ್ದಾರೆ.

“ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವಾಗ ರಾಜ್ಯಪಾಲರಿಗೆ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಸೇರಿಸುವ ಯಾವುದೇ  ಅವಕಾಶ ಇರುವುದಿಲ್ಲ. ಸರ್ಕಾರದ ಅನುಮೋದಿತ ಭಾಷಣವನ್ನು ಅವರು ಓದಬೇಕು” ಎಂದು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ.

ವಿವಿಧ ಕಾರಣಕ್ಕೆ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವೆ ಜಟಾಪಟಿ ನಡೆಯುತ್ತಿರುತ್ತದೆ. ಹಲವು ಬಾರಿ ಮಸೂದೆಗಳನ್ನು ವಾಪಸ್ ಕಳಿಸಲಾಗಿದೆ. ಆದರೆ ವರ್ಷದ ಮೊದಲ ಅಧಿವೇಶನದಲ್ಲಿಯೇ ರಾಜ್ಯಪಾಲರು  ಭಾಷಣ ಓದದೇ ಸಭಾತ್ಯಾಗ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular