ಚೆನ್ನೈ: ತಮಿಳುನಾಡು ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆ ಟಿಎಪಿಎಸ್ ಘೋಷಿಸುವ ಮೂಲಕ ಎರಡು ದಶಕಗಳ ಬೇಡಿಕೆ ಈಡೇರಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೊಸ ಪಿಂಚಣಿ ಯೋಜನೆ ಟಿಎಪಿಎಸ್ ಘೋಷಿಸಿದ್ದಾರೆ. ತಮಿಳುನಾಡು ಹೊಸ ಪಿಂಚಣಿ ಖಾತರಿ ಯೋಜನೆ ಘೋಷಿಸುವ ಮೂಲಕ ಎರಡು ದಶಕದ ಬೇಡಿಕೆಯನ್ನು ಈಡೇರಿಸಿದೆ. ಸರ್ಕಾರಿ ನೌಕರರಿಗೆ ಅವರ ಕೊನೆಯ ವೇತನದ ಶೇಕಡ 50ರಷ್ಟು ಪಿಂಚಣಿ ದೊರೆಯಲಿದೆ. ಈ ಹೊಸ ಯೋಜನೆಯಲ್ಲಿ ಹಳೆ ಪಿಂಚಣಿಯ ಯೋಜನೆಯ ಪ್ರಯೋಜನಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನೌಕರರ ಶೇಕಡ 10 ರಷ್ಟು ಕೊಡುಗೆಯ ಜೊತೆಗೆ ಪಿಂಚಣಿ ನಿಧಿಗೆ ಅಗತ್ಯವಿರುವ ಸಂಪೂರ್ಣ ಹೆಚ್ಚುವರಿ ಹಣ ಒದಗಿಸುತ್ತದೆ. ಶೇ. 50ರಷ್ಟು ಪಿಂಚಣಿ ಪಡೆದುಕೊಳ್ಳುವ ಪಿಂಚಣಿದಾರರಿಗೆ ಸರ್ಕಾರಿ ನೌಕರರ ರೀತಿ ಪ್ರತಿ ಆರು ತಿಂಗಳಿಗೊಮ್ಮೆ ತುಟಿ ಭತ್ಯೆ ಹೆಚ್ಚಳ ಸೌಲಭ್ಯ ಸಿಗಲಿದೆ. ಪಿಂಚಣಿದಾರರು ಮೃತಪಟ್ಟಲ್ಲಿ ಅವರ ನಾಮನಿರ್ದೇಶಿತರಿಗೆ ಪಿಂಚಣಿ ಮೊತ್ತದ ಶೇಕಡ 60ರಷ್ಟು ಹಣವನ್ನು ಕುಟುಂಬ ಪಿಂಚಣಿಯಾಗಿ ನೀಡಲಾಗುವುದು.
ನೌಕರರು ಸೇವಾ ಅವಧಿಯಲ್ಲಿ ಮೃತಪಟ್ಟಲ್ಲಿ ಅಥವಾ ನಿವೃತ್ತಿ ಸಮಯದಲ್ಲಿ ಮರಣ ಹೊಂದಿದರೆ ಅವರ ಉಳಿದ ಸೇವಾ ಅವಧಿಗೆ ಅನುಗುಣವಾಗಿ ಗರಿಷ್ಠ 25 ಲಕ್ಷ ರೂ. ವರೆಗೆ ನೀಡಲಾಗುವುದು. ಹೊಸ ಪಿಂಚಣಿ ಯೋಜನೆ ಜಾರಿಯಾದ ಬಳಿಕ ಪಿಂಚಣಿ ಪಡೆಯಲು ಅರ್ಹತಾ ಸೇವಾ ಅವಧಿಯನ್ನು ಪೂರ್ಣಗೊಳಿಸದೆ ನಿವೃತ್ತರಾಗುವ ಎಲ್ಲರಿಗೂ ಕನಿಷ್ಠ ಪಿಂಚಣಿ ನೀಡಲಾಗುವುದು ಎಂದು ಸ್ಟಾಲಿನ್ ಮಾಹಿತಿ ನೀಡಿದ್ದಾರೆ.

