ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿವೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್ಗಳ ಸವಾಲಿನ ಗುರಿಯನ್ನು ನೀಡಿದೆ. ಸದ್ಯ ಭಾರತಕ್ಕೆ ಅಗ್ನಿಪರೀಕ್ಷೆ ಶುರುವಾಗಿದ್ದು, ಈ ಮೊತ್ತವನ್ನು ಚೇಸ್ ಮಾಡಿದರೆ ಸೆಮಿಫೈನಲ್ ತಲುಪಲಿದ್ದು, ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ವೆಸ್ಟ್ ಇಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಶೈ ಹೋಪ್ ಹಾಗೂ ರಾಸ್ಟನ್ ಚೇಸ್ 68 ರನ್ಗಳ ಜತೆಯಾಟವನ್ನಾಡಿದರು. ಹೋಪ್ 32 ರನ್ ಗಳಿಸಿದರೆ, ಚೇಸ್ 40 ರನ್ ಬಾರಿಸಿದರು. ಇನ್ನುಳಿದಂತೆ ಕಣಕ್ಕಿಳಿದ ಕೂಡಲೇ ಅಬ್ಬರಿಸಿದ ಶಿಮ್ರಾನ್ ಹೆಟ್ಮಾಯೆರ್ 12 ಎಸೆತಗಳಲ್ಲಿ 27 ರನ್ ಬಾರಿಸಿ ಬೇಗನೆ ವಿಕೆಟ್ ಒಪ್ಪಿಸಿದರು. ಭಯಾನಕ ಆಟಗಾರ ಶೆರ್ಫೆನ್ ರುದರ್ಫೋರ್ಡ್ 14 ರನ್ ಕಲೆಹಾಕಿ ನಿರ್ಗಮಿಸಿದರು. ಹೀಗೆ 119 ರನ್ಗೆ 4 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ ತಂಡದ ಪರ ಐದನೇ ವಿಕೆಟ್ಗೆ ಜತೆಯಾದ ಜೇಸನ್ ಹೋಲ್ಡರ್ ರೊವ್ಮನ್ ಪೋವೆಲ್ ಜೋಡಿ 35 ಎಸೆತಗಳಲ್ಲಿ 76 ರನ್ಗಳ ಜತೆಯಾಟವನ್ನಾಡಿ ಒಳ್ಳೆಯ ಕೊಡುಗೆ ನೀಡಿದರು. ಹೋಲ್ಡರ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 37 ರನ್ ಬಾರಿಸಿದರೆ, ಪೋವೆಲ್ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 34 ರನ್ ಕಲೆಹಾಕಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.

