ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2026ರ ಮೊದಲ ಸೆಮಿಫೈನಲ್ ಪಂದ್ಯ ಘೋಷಣೆಯಾಗಿದೆ. ಇಂದು ( ಮಾರ್ಚ್ 1 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಹೊರಬಿದ್ದ ಬಳಿಕ ಮೊದಲ ಸೆಮಿಫೈನಲ್ನಲ್ಲಿ ಕಣಕ್ಕಿಳಿಯುವ ತಂಡಗಳು ಯಾವುವು ಎಂಬುದು ಬಹಿರಂಗವಾಗಿದೆ.
ಟೂರ್ನಿಯಲ್ಲಿ ಸೋಲನ್ನೇ ಕಾಣದ ದಕ್ಷಿಣ ಆಫ್ರಿಕಾ ಇಂದು ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್ಗಳ ಗೆಲುವನ್ನು ದಾಖಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 154 ರನ್ಗಳ ಸಾಧಾರಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 17.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತು.
ಈ ಮೂಲಕ ದಕ್ಷಿಣ ಆಫ್ರಿಕಾ 6 ಅಂಕಗಳನ್ನು ಹೊಂದಿ ಗ್ರೂಪ್ ಒಂದರ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಖಾಯಂ ಮಾಡಿಕೊಂಡಿದೆ. ಗ್ರೂಪ್ ಒಂದರಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಗ್ರೂಪ್ ಎರಡರಲ್ಲಿ ಎರಡನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಹೀಗಾಗಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಬುಧವಾರ ( ಮಾರ್ಚ್ 4 ) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ( ಗ್ರೂಪ್ ಒಂದರ ಟಾಪ್ ತಂಡ ) ಹಾಊ ನ್ಯೂಜಿಲೆಂಡ್ ( ಗ್ರೂಪ್ ಎರಡರಲ್ಲಿ ಎರಡನೇ ಸ್ಥಾನದಲ್ಲಿರುವ ತಂಡ ) ಮುಖಾಮುಖಿಯಾಗಲಿವೆ. ಸಂಜೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

