ಮುಂಬೈ: ನಾಡಿದ್ದು ( ಫೆಬ್ರವರಿ 7 ) ಬಹು ನಿರೀಕ್ಷಿತ ಕ್ರಿಕೆಟ್ ಮಿನಿ ಸಮರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ವಿಶ್ವದ ಒಟ್ಟು 20 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಭಾರತ ಗ್ರೂ ‘ಎ’ನಲ್ಲಿದ್ದು, ಪಾಕಿಸ್ತಾನ ಸಹ ಇದೇ ಗುಂಪಿನಲ್ಲಿದೆ. ಜತೆಗೆ ಕ್ರಿಕೆಟ್ ಶಿಶುಗಳಾದ ನಮೀಬಿಯಾ, ನೆದರ್ಲೆಂಡ್ಸ್ ಹಾಗೂ ಯುಎಸ್ಎ ತಂಡಗಳು ಸಹ ಇವೆ.
ಟೂರ್ನಿಯ ಉದ್ಘಾಟನಾ ಪಂದ್ಯ ಫೆಬ್ರವರಿ 7ರಂದು ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವೆ ನಡೆಯಲಿದ್ದು, ಅದೇ ದಿನ ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ ಫೆಬ್ರವರಿ 12ರಂದು ಭಾರತ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದ್ದು, ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಬೇಕಿದೆ.
ಆದರೆ ಎರಡು ದೇಶಗಳ ನಡುವಿನ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿದೆ ಎನ್ನಲಾಗಿದ್ದು, ಸದ್ಯ ಈ ಸುದ್ದಿ ಕ್ರೀಡಾ ಲೋಕದ ಬಹು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಕುರಿತ ಪ್ರಶ್ನೆ ಇಂದು ( ಫೆಬ್ರವರಿ 5 ) ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಭಾಗವಹಿಸಿದ ಪತ್ರಿಕಾಗೋಷ್ಠಿಯಲ್ಲೂ ಸಹ ಕೇಳಿಬಂದಿದ್ದು, ಸೂರ್ಯ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ಮನಸ್ಥಿತಿ ಸ್ಪಷ್ಟವಾಗಿದೆ. ಪಂದ್ಯವನ್ನಾಡಲು ನಾವು ಸಿದ್ಧರಿಲ್ಲ ಎಂದು ಹೇಳಿಲ್ಲ. ಅದು ಬಂದದ್ದು ಇನ್ನೊಂದು ಕಡೆಯಿಂದ. ಐಸಿಸಿ ಅಧಿಕೃತ ವೇಳಾಪಟ್ಟಿಯನ್ನು ನೀಡಿದೆ. ಬಿಸಿಸಿಐ ಹಾಗೂ ಸರ್ಕಾರ ಎರಡು ತಂಡಗಳ ಪಂದ್ಯವನ್ನು ಪ್ರತ್ಯೇಕ ದೇಶದಲ್ಲಿ ನಡೆಸಲು ಐಸಿಸಿ ಜತೆ ಸೇರಿ ತೀರ್ಮಾನಿಸಿದೆ. ಕೊಲಂಬೊಗೆ ನಮ್ಮ ವಿಮಾನ ಬುಕ್ ಆಗಿದೆ. ಹಾಗಾಗಿ ನಾವು ತೆರಳುತ್ತೇವೆ’ ಎಂದು ಸೂರ್ಯಕುಮಾರ್ ಯಾದವ್ ಭಾರತ ಪಂದ್ಯವನ್ನಾಡಲು ಸಜ್ಜು ಎಂದು ತಿಳಿಸಿದರು.

