ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯ ಸೂಪರ್ 8 ಸುತ್ತು ನಿನ್ನೆಯಿಂದ ( ಫೆಬ್ರವರಿ 21 ) ಆರಂಭಗೊಂಡಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದಿದ್ದ ಸುತ್ತಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಇಂದು ( ಫೆಬ್ರವರಿ 22 ) ನಡೆಯಲಿರುವ ಎರಡು ಪಂದ್ಯಗಳ ಮೇಲೆ ಪ್ರೇಕ್ಷಕರ ಚಿತ್ತ ನೆಟ್ಟಿದೆ.
ಮಧ್ಯಾಹ್ನ ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳು ಕಣಕ್ಕಿಳಿಯಲಿದ್ದು, ಸಂಜೆ ನಡೆಯುವ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಡಲಿವೆ. ಇನ್ನು ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತದ ಆಡುವ ಬಳಗದಲ್ಲಿ ಬದಲಾವಣೆಯಾಗಲಿದೆಯಾ ಹಾಗೂ ಬದಲಾವಣೆಯಾಗಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
ಅದರಲ್ಲೂ ಗ್ರೂಪ್ ಹಂತದಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ ಹಾಗೂ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ತಿಲಕ್ ವರ್ಮಾ ಕುರಿತು ಸಾಕಷ್ಟು ಟ್ರೋಲ್‌ಗಳು ಹರಿದಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರಲ್ಲಿ ಒಬ್ಬರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪೂರಕವೆಂಬಂತೆ ಸಂಜು ಸ್ಯಾಮ್ಸನ್ ಹೆಚ್ಚು ಕಾಲ ನೆಟ್‌ನಲ್ಲಿ ಅಭ್ಯಾಸ ನಡೆಸಿದ್ದು, ಸಂಜು ಪಕ್ಕಾ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಿನ್ನೆ ಪಂದ್ಯದ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಂಜು ಸ್ಯಾಮ್ಸನ್ ಆಡಿಸುವ ಕುರಿತು ಪ್ರಶ್ನೆ ಬರುತ್ತಿದ್ದಂತೆ ಉತ್ತರಿಸಿದ ಸೂರ್ಯಕುಮಾರ್ ಯಾದವ್ ‘ನಾನು ಅಭಿಷೇಕ್ ಶರ್ಮಾ ಸ್ಥಾನದಲ್ಲಿ ಅಥವಾ ತಿಲಕ್ ವರ್ಮಾ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿಸಬೇಕು ಎಂದು ಹೇಳುತ್ತಿದ್ದೀರಾ?’ ಎಂದು ನಕ್ಕಿದ್ದಾರೆ.
ಮುಂದುವರಿದು ಮಾತನಾಡಿದ ಸೂರ್ಯಕುಮಾರ್ ಯಾದವ್ ‘ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ನಾವು ಪವರ್‌ಪ್ಲೇನಲ್ಲಿ 40ರಿಂದ 50 ರನ್ ಪೇರಿಸುತ್ತಿದ್ದೇವೆ. ಇದು ಸಹಜವಾದ ಆಟ. ಈ ಹಿಂದೆ ನಾವು ಸರಣಿಗಳಲ್ಲಿ ಅತ್ಯದ್ಭುತ ಆಟವಾಡಿದ್ದ ಕಾರಣ ಈ ಆಟ ಕಳಪೆಯಾಗಿ ಕಾಣಿಸುತ್ತಿದೆ ಅಷ್ಟೇ. ಇಲ್ಲಿ ಪಿಚ್‌ಗಳು ಬದಲಾವಣೆಯಿಂದ ಕೂಡಿದ್ದು, ಸವಾಲಾಗಿದೆ’ ಎಂದು ಉತ್ತರಿಸಿ ಸದ್ಯಕ್ಕೆ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ಇಲ್ಲ ಎಂದರು.

