ಇಂದು ( ಫೆಬ್ರವರಿ 15 ) ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣ ವಿಶ್ವ ಕ್ರಿಕೆಟ್‌ನ ಅತಿದೊಡ್ಡ ಮುಖಾಮುಖಿಗಳಲ್ಲಿ ಒಂದಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟಕ್ಕೆ ವೇದಿಕೆಯಾಗಲಿದೆ.
ಹೌದು, ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿಂದು ಇತ್ತಂಡಗಳು ಮುಖಾಮುಖಿಯಾಗಲಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಇಲ್ಲಿಯವರೆಗೂ ತಲಾ ಎರಡು ಪಂದ್ಯಗಳನ್ನಾಡಿ ಎರಡರಲ್ಲಿಯೂ ಗೆದ್ದಿದ್ದು, ಎ ಗುಂಪಿನ ಅಂಕಪಟ್ಟಿಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಮಾತ್ರವಲ್ಲದೇ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ಬಹುತೇಕ ಖಾತರಿಯಾಗಲಿದೆ. ಹೀಗೆ ಭಾರೀ ಕುತೂಹಲ ಹುಟ್ಟುಹಾಕಿರುವ ಈ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳ ನಾಯಕರು ಸುದ್ದಿಗೋಷ್ಟಿ ನಡೆಸಿದ್ದಾರೆ.
ಈ ವೇಳೆ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಭಾರತ ತಂಡದ ಪರ ಕಳೆದ ಪಂದ್ಯದಲ್ಲಿ ಕಣಕ್ಕಿಳಿಯದ ಆಟಗಾರ ಅಭಿಷೇಕ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ಹೌದು, ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದು ಡಕ್‌ಔಟ್ ಆದ ಬಳಿಕ ಹೊಟ್ಟೆ ನೋವಿನ ಕಾರಣದಿಂದ ಆ ಪಂದ್ಯದಲ್ಲಿ ಫೀಲ್ಡಿಂಗ್ ಮಾಡದೇ ಅನಾರೋಗ್ಯಕ್ಕೊಳಗಾಗಿದ್ದ ಅಭಿಷೇಕ್ ಶರ್ಮಾ ನಂತರದ ಪಂದ್ಯಕ್ಕೂ ಅಲಭ್ಯರಾಗಿದ್ದರು. ಹೀಗಾಗಿ ಅಭಿಷೇಕ್ ಶರ್ಮಾ ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಇದರ ಕುರಿತು ಮಾತನಾಡಿದ ಸಲ್ಮಾನ್ ಅಲಿ ಆಘಾ ‘ಆತ ಒಳ್ಳೆಯ ಆಟಗಾರ ಎಂಬುದು ನಮಗೆಲ್ಲ ಗೊತ್ತು. ಹಾಗೆ ಪಂದ್ಯದಲ್ಲಿ ಆತ ಕಣಕ್ಕಿಳಿಯಲಿದ್ದಾನೆ ಎಂದು ಭಾವಿಸುತ್ತೇನೆ. ಏಕೆಂದರೆ ಭಾರತದ ಉತ್ತಮ ತಂಡದ ವಿರುದ್ಧ ಆಡಬೇಕೆಂಬುದು ನಮ್ಮ ಬಯಕೆ. ಹೀಗಾಗಿ ಆತ ಚೇತರಿಸಿಕೊಂಡು ಕಣಕ್ಕಿಳಿಯಲಿ’ ಎಂದು ಹೇಳಿಕೆ ನೀಡಿದ್ದಾರೆ.

