ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 24ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಕಂಡು ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ನ್ಯೂಜಿಲೆಂಡ್ಗೆ 176 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಏಡನ್ ಮಾರ್ಕ್ರಮ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 17.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟಿಮ್ ಸೈಫರ್ಟ್ 13 ರನ್ ಹಾಗೂ ಫಿನ್ ಅಲೆನ್ 31 ರನ್ ಕಲೆಹಾಕಿದರು. ಇನ್ನುಳಿದಂತೆ ರಚಿನ್ ರವೀಂದ್ರ 13, ಗ್ಲೆನ್ ಫಿಲಿಪ್ಸ್ 1, ಮಾರ್ಕ್ ಕ್ಯಾಂಪ್ಮನ್ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್ ಬಾರಿಸಿದರು. ಡೇರಿಲ್ ಮಿಚೆಲ್ 32, ಮಿಚೆಲ್ ಸ್ಯಾಂಟ್ನರ್ 4, ಜೇಮ್ಸ್ ನೀಶಮ್ ಅಜೇಯ 23 ಹಾಗೂ ಮ್ಯಾಟ್ ಹೆನ್ರಿ ಅಜೇಯ 9 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸೆನ್ ನಾಲ್ಕು ವಿಕೆಟ್, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ಹಾಗೂ ಕಾರ್ಬಿನ್ ಬಾಷ್ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 20 ರನ್ ಗಳಿಸಿದರೆ, ಗೆಲುವಿನವರೆಗೂ ಅಬ್ಬರಿಸಿದ ನಾಯಕ ಏಡನ್ ಮಾರ್ಕ್ರಮ್ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 86 ರನ್ ಬಾರಿಸಿದರು. ಇನ್ನುಳಿದಂತೆ ರಯಾನ್ ರಿಕೆಲ್ಟನ್ 21, ಡಿವಾಲ್ಡ್ ಬ್ರೆವಿಸ್ 21 ಹಾಗೂ ಡೇವಿಡ್ ಮಿಲ್ಲರ್ ಅಜೇಯ 24 ರನ್ ಬಾರಿಸಿದರು.
ಲಾಕಿ ಫರ್ಗ್ಯೂಸನ್, ಜೇಮ್ಸ್ ನೀಶಮ್ ಹಾಗೂ ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್ ಪಡೆದರು.

