ನಿನ್ನೆ ( ಫೆಬ್ರವರಿ 25 ) ಕೊಲಂಬೋದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೂಪರ್ 8 ಪಂಡ್ಯದಲ್ಲಿ ನ್ಯೂಜಿಲೆಂಡ್ ಬರೋಬ್ಬರಿ 61 ರನ್ ಗಳ ಗೆಲುವು ಸಾಧಿಸುವುದರ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ಹೀನಾಯ ಸೋಲುಂಡ ಶ್ರೀಲಂಕಾ ಸೂಪರ್ 8ರಲ್ಲಿ ಸತತ ಎರಡನೇ ಸೋಲನ್ನು ಕಂಡು ಸೆಮಿ ಫೈನಲ್ ಪ್ರವೇಶಿಸುವ ಅರ್ಹತೆ ಕಳೆದುಕೊಂಡು ಟೂರ್ನಿಯಿಂದ ಹೊರ ಬಿದ್ದಿದೆ.
ಇದೀಗ ಗ್ರೂಪ್ 2ರಲ್ಲಿ ಇಂಗ್ಲೆಂಡ್ ಈಗಾಗಲೇ ಸೆಮಿ ಫೈನಲ್ ತಲುಪಿದ್ದು, 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಹಾಗೂ ಕೇವಲ 1 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡಗಳ ನಡುವೆ ಸೆಮಿ ಫೈನಲ್ ಪ್ರವೇಶಕ್ಕಾಗಿ ಪೈಪೋಟಿ ಶುರುವಾಗಿದೆ.
ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಿದರೆ, ಪಾಕಿಸ್ತಾನ ತನ್ನ ಅಂತಿಮ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ನ್ಯೂಜಿಲೆಂಡ್ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ ನೇರವಾಗಿ ಸೆಮಿ ಫೈನಲ್ ಪ್ರವೇಶಿಸಲಿದ್ದು ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.
ಒಂದುವೇಳೆ ಇಂಗ್ಲೆಂಡ್ ನ್ಯೂಜಿಲೆಂಡ್ ತಂಡವನ್ನು ಮಣಿಸಿದರೆ, ಅತ್ತ ಪಾಕಿಸ್ತಾನ ಶ್ರೀಲಂಕಾ ತಂಡವನ್ನು ಸೋಲಿಸಿದರೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳು ತಲಾ 3 ಅಂಕಗಳನ್ನು ಹೊಂದಲಿದ್ದು ನೆಟ್ ರನ್ ರೇಟ್ ಆಧಾರದ ಮೇಲೆ ಸೆಮಿ ಫೈನಲ್ ಪ್ರವೇಶ ನಿರ್ಧಾರವಾಗಲಿದೆ.
ಹೀಗೆನಾದರೂ ಆದರೆ ಪಾಕಿಸ್ತಾನ ತಂಡ ಸೆಮಿ ಫೈನಲ್ ಪ್ರವೇಶಿಸಲು ಎಷ್ಟು ರನ್ ಅಂತರದಲ್ಲಿ ಗೆದ್ದರೆ ಅವಕಾಶ ಸಿಗಲಿದೆ ಎಂಬ ಲೆಕ್ಕಾಚಾರ ಹೊರ ಬಿದ್ದಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿದರೆ ಎಷ್ಟು ರನ್ ಅಂತರದಿಂದ ಗೆದ್ದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಎಷ್ಟು ರನ್ ಅಂತರದಿಂದ ಗೆದ್ದರೆ ಪಾಕಿಸ್ತಾನ ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚು ನೆಟ್ ರನ್ ರೇಟ್ ಪಡೆದುಕೊಂಡು ಸೆಮಿ ಫೈನಲ್ ಪ್ರವೇಶಿಸಲಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಆ ಅಂಕಿ ಅಂಶ ಈ ಕೆಳಕಂಡಂತಿದೆ.
ಹಾದಿ 1: ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ 50 ರನ್ ಅಂತರದಿಂದ ಸೋಲಿಸಿದರೆ ಪಾಕಿಸ್ತಾನ 200 ರನ್ ಬಾರಿಸಿ ಶ್ರೀಲಂಕಾ ತಂಡದ ವಿರುದ್ಧ 20ಕ್ಕೂ ಹೆಚ್ಚು ರನ್ ಅಂತರದಿಂದ ಜಯ ಸಾಧಿಸಬೇಕಿದೆ.
ಹಾದಿ 2: ಇಂಗ್ಲೆಂಡ್ ತಂಡ ಏನಾದರೂ ನ್ಯೂಜಿಲೆಂಡ್ ತಂಡವನ್ನು 40 ರನ್ ಅಂತರದಿಂದ ಸೋಲಿಸಿದರೆ, ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ 200 ರನ್ ಕಲೆಹಾಕಿ 28ರಿಂದ 30 ರನ್ ಅಂತರದಲ್ಲಿ ಜಯ ಸಾಧಿಸಬೇಕಿದೆ.
ಹಾದಿ 3: ಇಂಗ್ಲೆಂಡ್ ನ್ಯೂಜಿಲೆಂಡ್ ತಂಡವನ್ನು 10 ರನ್ ಅಂತರದಿಂದ ಸೋಲಿಸಿದರೆ ಪಾಕಿಸ್ತಾನ ಶ್ರೀಲಂಕಾ ತಂಡವನ್ನು 56+ ರನ್ ಅಂತರದಲ್ಲಿ ಸೋಲಿಸಬೇಕಿದೆ.
ಹಾದಿ 4: ಇಂಗ್ಲೆಂಡ್ ನ್ಯೂಜಿಲ್ಯಾಂಡ್ ವಿರುದ್ಧ 1 ರನ್ ಅಂತರದ ಜಯ ಸಾಧಿಸಿದರೆ, ಪಾಕಿಸ್ತಾನ 200 ರನ್ ಬಾರಿಸಿ, 67+ ರನ್ ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಲೇಬೇಕು.
ಇದು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮೊದಲು ಬ್ಯಾಟಿಂಗ್ ಮಾಡಿದರೆ ಇರುವ ಅವಕಾಶವಾಗಿದ್ದು, ಎರಡನೇ ಬ್ಯಾಟಿಂಗ್ ಕುರಿತಾದ ಅಂಕಿ ಅಂಶಗಳು ಇನ್ನೂ ಲಭ್ಯವಾಗಬೇಕಿದೆ. ಸದ್ಯ ಈ ಅಂಕಿ ಅಂಶವನ್ನು ಕಂಡು ನೆಟ್ಟಿಗರು ಪಾಕಿಸ್ತಾನದ ಕಾಲೆಳೆಯುತ್ತಿದ್ದು, 200+ ರನ್ ಗುರಿ ನೀಡಿ ಅಷ್ಟು ದೊಡ್ಡ ಅಂತರದಲ್ಲಿ ಗೆಲುವು ಅಸಾಧ್ಯ, ಪಾಕಿಸ್ತಾನ ಟೂರ್ನಿಂದ ಹೊರಬೀಳುವುದು ಖಚಿತ ಎನ್ನುತ್ತಿದ್ದಾರೆ.

