ಭಾರತ ಹಾಗೂ ಶ್ರೀಲಂಕಾದಲ್ಲಿ 2026ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಇಂದು ( ಫೆಬ್ರವರಿ 12 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ಹಾಗೂ ನಮೀಬಿಯಾ ತಂಡಗಳು ಸೆಣಸಾಟ ನಡೆಸಲಿವೆ.
ಈ ಪಂದ್ಯ ಆರಂಭಕ್ಕೂ ಮುನ್ನ ಇತ್ತಂಡಗಳು ಕ್ರೀಡಾಂಗಣ ತಲುಪಿ ಅಗತ್ಯವಿರುವ ಅಭ್ಯಾಸವನ್ನು ಮಾಡಿಕೊಳ್ಳುತ್ತಿವೆ. ಮೊದಲಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯ ಗೆದ್ದ ಭಾರತಕ್ಕೆ ಇದು ಎರಡನೇ ಗ್ರೂಪ್ ಹಂತದ ಪಂದ್ಯವಾಗಿದ್ದು, ನೆದರ್ಲೆಂಡ್ಸ್ ವಿರುದ್ಧ ಸೋತಿರುವ ನಮೀಬಿಯಾಗೆ ಸಹ ಇದು ಟೂರ್ನಿಯ ಎರಡನೇ ಪಂದ್ಯವಾಗಿದೆ.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ತಯಾರಿ ಬಗ್ಗೆ ಮಾತನಾಡಿರುವ ನಮೀಬಿಯಾದ ನಾಯಕ ಗೆರ್‌ಹಾರ್ಡ್ ಎರಾಸ್ಮಸ್ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ತಮ್ಮ ತಂಡಕ್ಕೆ ಆದ ಹಿನ್ನಡೆಯನ್ನು ಬಿಚ್ಚಿಟ್ಟಿದ್ದಾರೆ. ‘ನಮಗೆ ಈ ಪಂದ್ಯಕ್ಕೂ ಮುನ್ನ ತಯಾರಿ ಮಾಡಿಕೊಳ್ಳಲು ರಾತ್ರಿ ಸಮಯದಲ್ಲಿ ನೆಟ್ ಬಿಟ್ಟುಕೊಡಲಿಲ್ಲ. ಏಕೆಂದು ನನಗೆ ತಿಳಿದಿಲ್ಲ. ಭಾರತ ತಂಡದವರು ಸಂಜೆ ಎರಡು ನೆಟ್‌ಗಳಲ್ಲಿ ಅಭ್ಯಾಸ ಮಾಡಿಕೊಂಡರು ಹಾಗೂ ನಾಳೆ ಇರುವ ಪಂದ್ಯಕ್ಕೆ ಕೆನಡಾ ಸಹ ರಾತ್ರಿಯೇ ನೆಟ್‌ನಲ್ಲಿ ಅಭ್ಯಾಸ ನಡೆಸಿದರು. ಆದರೆ ನಾವು ಇದಕ್ಕೆ ಧೃತಿಗೆಡುವುದಿಲ್ಲ. ನಮೀಬಿಯಾದಲ್ಲೂ ಸಹ ನಮಗೆ ಫ್ಲಡ್ ಲೈಟ್‌ಗಳಿಲ್ಲ. ಹೀಗಾಗಿ ಇದು ನಮಗೆ ಹೊಸತೇನಲ್ಲ. ನಾವು ನಮ್ಮದೇ ರೀತಿಯಲ್ಲಿ ಪಂದ್ಯವನ್ನಾಡಿ ಗೆಲ್ಲಲಿದ್ದೇವೆ’ ಎಂದು ತಿಳಿಸಿದರು.

