ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯ ಸೂಪರ್ 8 ಪಂದ್ಯಗಳು ಜರುಗುತ್ತಿದ್ದು, ಗ್ರೂಪ್ ಹಂತದಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಭಾರತ ಈ ಸುತ್ತಿನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲು ಕಂಡ ಭಾರತ ಗ್ರೂಪ್ 1ರ ಅಂಕಪಟ್ಟಿಯಲ್ಲಿ -3.800 ನೆಟ್ ರನ್‌ರೇಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಭಾರತದ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ ಕಂಡ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ.
ಹೀಗಾಗಿ ಸದ್ಯ ಭಾರತ ಸೆಮಿಫೈನಲ್ ಪ್ರವೇಶಿಸುವ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭಾರತ ಈ ಹಂತದಲ್ಲಿ ತನ್ನ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹೀಗೆ ಎರಡು ಪಂದ್ಯಗಳನ್ನು ಗೆದ್ದರೂ ಸಹ ಉಳಿದ ತಂಡಗಳ ಪಂದ್ಯಗಳ ಫಲಿತಾಂಶ ಭಾರತದ ಸೆಮಿಫೈನಲ್ ಪ್ರವೇಶವನ್ನು ನಿರ್ಧರಿಸಲಿದ್ದು, ಮೊದಲಿಗೆ ಭಾರತ ಮೈನಸ್ ಆಗಿರುವ ತನ್ನ ನೆಟ್ ರನ್‌ರೇಟ್ ಸರಿಪಡಿಸಿಕೊಳ್ಳಬೇಕಿದೆ. ಹೌದು, ಸದ್ಯಕ್ಕೆ ಭಾರತದ ನೆಟ್ ರನ್‌ರೇಟ್ -3.800 ಆಗಿದ್ದು, ಇದು ಪ್ಲಸ್ ಆಗಬೇಕೆಂದರೆ ಅಂದರೆ 0.001 ಆಗಬೇಕೆಂದರೆ ಭಾರತ ನಾಳೆ ( ಫೆಬ್ರವರಿ 26 ) ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಿದೆ.
ಮೊದಲು ಬ್ಯಾಟಿಂಗ್ ಮಾಡಿದರೆ ಇಷ್ಟು ರನ್‌ಗಳ ಗೆಲುವು ಕಡ್ಡಾಯ
ಭಾರತದ ಮೈನಸ್ ನೆಟ್ ರನ್‌ರೇಟ್ ಪ್ಲಸ್ ಆಗಬೇಕೆಂದರೆ ಭಾರತ ಮೊದಲು ಬ್ಯಾಟಿಂಗ್ ಮಾಡಿ ಜಿಂಬಾಬ್ವೆಗೆ ಎಷ್ಟೇ ರನ್ ಗುರಿ ನೀಡಿದರೂ 77 ರನ್‌ಗಳ ಅಂತರದಿಂದ ಗೆಲುವು ಸಾಧಿಸಬೇಕಿದೆ.
ಚೇಸ್ ಮಾಡಿದರೆ ಹೀಗಿರಲೇಬೇಕು
ಒಂದುವೇಳೆ ಟೀಮ್ ಇಂಡಿಯಾ ಚೇಸ್ ಮಾಡಿದರೆ 101 ರನ್‌ಗಳ ಟಾರ್ಗೆಟ್ ಅನ್ನು 7.1 ಓವರ್‌ಗಳಲ್ಲಿ ಬೆನ್ನಟ್ಟಬೇಕು. 121 ರನ್‌ಗಳ ಗುರಿ ಸಿಕ್ಕರೆ 8.4 ಓವರ್‌ಗಳಲ್ಲಿ ಮುಟ್ಟಬೇಕು. 141 ರನ್‌ಗಳ ಗುರಿ ನೀಡಿದರೆ 10 ಓವರ್‌ಗಳಲ್ಲಿ ಬಾರಿಸಬೇಕು. 161 ರನ್ ಗುರಿ ನೀಡಿದರೆ 11.3 ಓವರ್‌ಗಳಲ್ಲಿ ಬೆನ್ನಟ್ಟಬೇಕು. 181 ರನ್‌ಗಳ ಗುರಿಯನ್ನು 12.5 ಓವರ್‌ಗಳಲ್ಲಿ ಬಾರಿಸಬೇಕು.

