ಇಂದು ( ಫೆಬ್ರವರಿ 15 ) ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಭಾರತ 61 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಕಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಒಟ್ಟು 9 ಮುಖಾಮುಖಿಯಲ್ಲಿ ಭಾರತ 8ನೇ ಗೆಲುವನ್ನು ದಾಖಲಿಸಿ ತನ್ನ ಪಾರುಪತ್ಯವನ್ನು ಮುಂದುವರಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 176 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗೆ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಮೊದಲ ಓವರ್‌ನ ಕೊನೆಯ ಎಸೆತದಲ್ಲೇ ಕ್ಯಾಚ್ ನೀಡಿ ಡಕ್‌ಔಟ್ ಆಗುವ ಮೂಲಕ ಭಾರತ ಕೇವಲ 1 ರನ್‌ಗೆ 1 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಜತೆ ಸೇರಿ 87 ರನ್‌ಗಳ ಜತೆಯಾಟವನ್ನಾಡಿದರು. ಆರಂಭದಿಂದಲೂ ಅಬ್ಬರಿಸಿದ ಇಶಾನ್ ಕಿಶನ್ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 77 ರನ್ ಬಾರಿಸಿದರೆ, ತಿಲಕ್ ವರ್ಮಾ 25 ರನ್ ಗಳಿಸಿದರು. ಇನ್ನುಳಿದಂತೆ ನಾಯಕ ಸೂರ್ಯಕುಮಾರ್ ಯಾದವ್ 32, ಹಾರ್ದಿಕ್ ಪಾಂಡ್ಯ ಡಕ್‌ಔಟ್, ಶಿವಮ್ ದುಬೆ 27, ಅಕ್ಸರ್ ಪಟೇಲ್ ಡಕ್‌ಔಟ್ ಹಾಗೂ ಕೊನೆಯ ಓವರ್‌ನಲ್ಲಿ ಅಬ್ಬರಿಸಿದ ರಿಂಕು ಸಿಂಗ್ 4 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ ಅಜೇಯ 11 ರನ್ ಬಾರಿಸಿದರು.
ಪಾಕಿಸ್ತಾನದ ಪರ ಸೈಮ್ ಆಯೂಬ್ ಮೂರು ವಿಕೆಟ್, ಸಲ್ಮಾನ್ ಅಲಿ ಆಘಾ, ಶಾಹೀನ್ ಅಫ್ರಿದಿ ಹಾಗೂ ಉಸ್ಮಾನ್ ತಾರಿಕ್ ತಲಾ ಒಂದೊಂದು ವಿಕೆಟ್ ಪಡೆದರು.
ಪಾಕಿಸ್ತಾನದ ಇನ್ನಿಂಗ್ಸ್: ಭಾರತ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಕೇವಲ 34 ರನ್‌ಗೆ ತನ್ನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹಿಬ್ಜಾದ ಫರ್ಹಾನ್ ಮೊದಲ ಓವರ್‌ನಲ್ಲೇ ಡಕ್‌ಔಟ್ ಆದರು. ಬೆನ್ನಲ್ಲೇ ಮತ್ತೋರ್ವ ಆರಂಭಿಕ ಆಟಗಾರ ಸೈಮ್ ಆಯುಬ್ ಎರಡನೇ ಓವರ್‌ನಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು, ನಾಯಕ ಸಲ್ಮಾನ್ ಅಲಿ ಆಘಾ 4 ರನ್ ಹಾಗೂ ಬಾಬರ್ ಆಜಂ 5 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಅಲ್ಲಿಗೆ ಪಾಕಿಸ್ತಾನದ ಗೆಲುವಿನ ಕನಸು ಬಹುತೇಕ ಪತನವಾಗಿತ್ತು. ನಂತರ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಸ್ಮಾನ್ ಖಾನ್ 44 ರನ್ ಕಲೆಹಾಕಿ ಪಾಕಿಸ್ತಾನವನ್ನು ಅತಿ ಅಲ್ಪ ಮೊತ್ತ ಕಲೆಹಾಕುವುದರಿಂದ ತಪ್ಪಿಸಿದರು. ಇನ್ನುಳಿದಂತೆ ಶದಬ್ ಖಾನ್ 14, ಮೊಹಮ್ಮದ್ ನವಾಜ್ 4, ಫಾಹೀಮ್ ಅಶ್ರಫ್ 10, ಅಬ್ರಾರ್ ಅಹ್ಮದ್ ಡಕ್‌ಔಟ್, ಉಸ್ಮಾನ್ ತಾರಿಕ್ ಡಕ್‌ಔಟ್ ಹಾಗೂ ಶಾಹಿನ್ ಅಫ್ರಿದಿ ಅಜೇಯ 27 ರನ್ ಕಲೆಹಾಕಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಅಕ್ಸರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಕುಲ್‌ದೀಪ್ ಯಾದವ್ ಹಾಗೂ ತಿಲಕ್ ವರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

