ಇಂದು ( ಫೆಬ್ರವರಿ 15 ) ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯ ನಡೆಯುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 176 ರನ್‌ಗಳ ಗುರಿಯನ್ನು ನೀಡಿದೆ.
ಹೀಗೆ ಭಾರತದ ಇನ್ನಿಂಗ್ಸ್ ಮುಕ್ತಾಯವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರತದ ಇನ್ನಿಂಗ್ಸ್ ಕುರಿತು ಸಾಕಷ್ಟು ಪೋಸ್ಟ್‌ಗಳು ಬಂದಿದ್ದು, ಹೆಚ್ಚಾಗಿ ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಪೋಸ್ಟ್‌ಗಳು ಕಂಡುಬಂದಿವೆ.
ಏಷ್ಯಾ ಕಪ್ ರೀತಿಯೇ ಈ ಪಂದ್ಯದಲ್ಲೂ ಸಹ ಭಾರತ ಹಾಗೂ ಪಾಕಿಸ್ತಾನ ತಂಡದ ನಾಯಕರಾದ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಆಘಾ ಹಸ್ತಲಾಘವ ಮಾಡದೇ ಟಾಸ್ ಮುಗಿದ ಬಳಿಕ ತೆರಳಿದರು.
ಆದರೆ @iffiViews ಎಂಬ ಎಕ್ಸ್ ಖಾತೆಯಲ್ಲಿ ಫೋಟೊವೊಂದನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಸ್ತಲಾಘವ ಮಾಡಲು ಕೈನೀಡಿದ್ದು, ಅದನ್ನು ಪಾಕ್ ನಾಯಕ ಕಡೆಗಣಿಸಿದ್ದಾರೆ. ಆದರೆ ಅಸಲಿಯತ್ತಿಗೆ ಅಂತಹ ಘಟನೆ ನಡೆದಿಲ್ಲ. ಈ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೊವನ್ನು ಗೂಗಲ್ ಜಿಮಿನೈ ಅಪ್ಲಿಕೇಶನ್‌ನಲ್ಲಿ ಎಐ ಎಡಿಟ್ ಮಾಡಿ ತಯಾರಿಸಲಾಗಿದ್ದು, ಜಿಮಿನೈ ಲೋಗೊವನ್ನೂ ಸಹ ಫೋಟೊದಲ್ಲಿ ಕಾಣಬಹುದಾಗಿದೆ.

