HomeLatest Newsಭಾರತದ ಆರ್ಭಟಕ್ಕೆ ಕಿವೀಸ್ ಧೂಳೀಪಟ; ಫೈನಲ್‌ನಲ್ಲಿ ದಾಖಲೆಯ ಗೆಲುವು ಕಂಡು 3ನೇ ಟಿ20 ವಿಶ್ವಕಪ್ ಎತ್ತಿಹಿಡಿದ...

ಭಾರತದ ಆರ್ಭಟಕ್ಕೆ ಕಿವೀಸ್ ಧೂಳೀಪಟ; ಫೈನಲ್‌ನಲ್ಲಿ ದಾಖಲೆಯ ಗೆಲುವು ಕಂಡು 3ನೇ ಟಿ20 ವಿಶ್ವಕಪ್ ಎತ್ತಿಹಿಡಿದ ಭಾರತ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಗಿದೆ.

ಭಾರತದ ಇನ್ನಿಂಗ್ಸ್: ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅಬ್ಬರದ ಆರಂಭ ನೀಡಿದರು. ಇವರಿಬ್ಬರ ತಾಂಡವಕ್ಕೆ ಕೇವಲ 4 ಓವರ್‌ನಲ್ಲೇ ಭಾರತ ಅರ್ಧಶತಕ ಪೂರೈಸಿತು ಹಾಗೂ 7.2 ಓವರ್‌ಗಳಲ್ಲಿ ಶತಕ ದಾಟಿತು. ಅಭಿ‍ಷೇಕ್ ಶರ್ಮಾ ಟೂರ್ನಿಯ ವೇಗದ ಅರ್ಧಶತಕ ಬಾರಿಸಿ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ ಬಾರಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಒಂದಾದ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ 48 ಎಸೆತಗಳಲ್ಲಿ 105 ರನ್ ಬಾರಿಸಿದರು. ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಚಚ್ಚಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 89 ಸಿಕ್ಸರ್ ಚಚ್ಚಿದರೆ, ಇಶಾನ್ ಕಿಶನ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 54 ರನ್ ಚಚ್ಚಿದರು. ಹೀಗೆ ಕೇವಲ 15 ಓವರ್‌ಗಳಲ್ಲಿ ದ್ವಿಶತಕ ದಾಟಿದ್ದ ಭಾರತ ಜೇಮ್ಸ್ ನೀಶಮ್ ಎಸೆದ 16ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ಆಗ ತಾನೇ ಬಂದ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದರು. ಸೂರ್ಯ ಡಕ್‌ಔಟ್ ಆದರೆ, ಹಾರ್ದಿಕ್ ಪಾಂಡ್ಯ 18 ರನ್ ಬಾರಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ ಅಜೇಯ 8 ರನ್ ಹಾಗೂ ಕೊನೆಯ ಓವರ್‌ನಲ್ಲಿ ಅಬ್ಬರಿಸಿದ ಶಿವಮ್ ದುಬೆ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 26 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಜಿಲೆಂಡ್ ಪರ ಜೇಮ್ಸ್ ನೀಶಮ್ ಮೂರು ವಿಕೆಟ್, ರಚಿನ್ ರವೀಂದ್ರ ಹಾಗೂ ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್ ಪಡೆದರು.

ನ್ಯೂಜಿಲೆಂಡ್ ಇನ್ನಿಂಗ್ಸ್: ಭಾರತದ ಬೃಹತ್ ಗುರಿ ಹಿಂದೆ ಬಿದ್ದ ಕಿವೀಸ್ ಕೇವಲ 47 ರನ್‌ಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಪರ ಆರಂಭಿಕ ಆಟಗಾರ ಟಿಮ್ ಸೈಫರ್ಟ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ಬಿಟ್ಟರೆ ಉಳಿದ ಯಾವ ಆಟಗಾರನೂ ಯಶಸ್ವಿಯಾಗಲಿಲ್ಲ. ಟಿಮ್ ಸೈಫರ್ಟ್ 26 ಎಸೆತಗಳಲ್ಲಿ 52 ರನ್ ಬಾರಿಸಿದರೆ, ಮಿಚೆಲ್ ಸ್ಯಾಂಟ್ನರ್ 35 ಎಸೆತಗಳಲ್ಲಿ 43 ರನ್ ಕಲೆಹಾಕಿದರು. ಇನ್ನುಳಿದಂತೆ ಫಿನ್ ಅಲೆನ್ 9, ರಚಿನ್ ರವೀಂದ್ರ 1, ಗ್ಲೆನ್ ಫಿಲಿಪ್ಸ್ 5, ಮಾರ್ಕ್ ಚಾಂಪ್‌ಮನ್ 3, ಡ್ಯಾರಿಲ್ ಮಿಚೆಲ್ 17, ಜೇಮ್ಸ್ ನೀಶಮ್ 8, ಮ್ಯಾಟ್ ಹೆನ್ರಿ ಡಕ್‌ಔಟ್, ಜೇಕಬ್ ಡಫಿ 3 ಹಾಗೂ ಲಾಕಿ ಫರ್ಗ್ಯೂಸನ್ ಅಜೇಯ 6 ರನ್ ಗಳಿಸಿದರು.

ಭಾರತದ ಪರ ಜಸ್‌ಪ್ರೀತ್ ಬುಮ್ರಾ ನಾಲ್ಕು ವಿಕೆಟ್, ಅಕ್ಸರ್ ಪಟೇಲ್ ಮೂರು ವಿಕೆಟ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular