ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 36ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ 17 ರನ್‌ಗಳ ಗೆಲುವನ್ನು ದಾಖಲಿಸಿದೆ. ಈ ಮೂಲಕ ಭಾರತ ಗ್ರೂಪ್ ಹಂತದಲ್ಲಿನ ತನ್ನ ಎಲ್ಲ ಪಂದ್ಯಗಳನ್ನು ಗೆದ್ದುಬೀಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡು ಶಿವಮ್ ದುಬೆ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ ನೆದರ್ಲೆಂಡ್ಸ್‌ಗೆ 194 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಡಕ್‌ಔಟ್ ಆದರೆ, ಇಶಾನ್ ಕಿಶನ್ 18 ರನ್ ಗಳಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ 31 ರನ್ ಕಲೆಹಾಕಿದರೆ, ನಾಯಕ ಸೂರ್ಯಕುಮಾರ್ ಯಾದವ್ 38 ರನ್ ಗಳಿಸಿದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಮ್ ದುಬೆ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 66 ರನ್ ಚಚ್ಚಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 30 ರನ್ ಹಾಗೂ ರಿಂಕು ಸಿಂಗ್ 3 ಎಸೆತಗಳಲ್ಲಿ ಅಜೇಯ 6 ರನ್ ಬಾರಿಸಿದರು.
ನೆದರ್ಲೆಂಡ್ಸ್ ಪರ ಲೋಗನ್ ವಾನ್ ಬೀಕ್ ಮೂರು ವಿಕೆಟ್, ಆರ್ಯನ್ ದತ್ ಎರಡು ವಿಕೆಟ್ ಹಾಗೂ ಕೈಲ್ ಕ್ಲೈನ್ ಒಂದು ವಿಕೆಟ್ ಪಡೆದರು.
ನೆದರ್ಲೆಂಡ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕೆಲ್ ಲೆವಿಟ್ 24 ಹಾಗೂ ಮ್ಯಾಕ್ಸ್ ಓ ಡೌಡ್ 20, ಬಾಸ್ ಡೆ ಲೀಡ್ 33, ಅಲಿನ್ ಆಕರ್‌ಮನ್ 23, ಆರ್ಯನ್ ದತ್ ಡಕ್‌ಔಟ್, ಸ್ಕಾಟ್ ಎಡ್ವರ್ಡ್ಸ್ 15, ಜಾಚ್ ಲಯನ್-ಕ್ಯಾಚೆಟ್ 26, ನೋ ಕ್ರೋಸ್ ಅಜೇಯ 25 ಹಾಗೂ ಲಾಗನ್ ವಾನ್ ಬೀಕ್ ಅಜೇಯ 4 ರನ್ ದಾಖಲಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್, ಶಿವಮ್ ದುಬೆ ಎರಡು ವಿಕೆಟ್, ಜಸ್‌ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

