ಇಂದು ( ಫೆಬ್ರವರಿ 13 ) ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026ರ ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡು ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 170 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ ಓವರ್‌ಗಳಲ್ಲಿ 19.3 ಓವರ್‌ಗಳಲ್ಲಿ 146 ರನ್‌ಗೆ ಆಲ್‌ಔಟ್ ಆಗಿ ಭಾರೀ ಮುಖಭಂಗ ಅನುಭವಿಸಿದೆ.
ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ಬಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದಿದ್ದ ಆಸ್ಟ್ರೇಲಿಯಾ ಇದೀಗ ಜಿಂಬಾಬ್ವೆ ವಿರುದ್ಧ ಸೋತು ಮೂರನೇ ಸ್ಥಾನಕ್ಕೆ ಕುಸಿದಿದ್ದು, ತಲಾ ಎರಡು ಪಂದ್ಯಗಳನ್ನಾಡಿ ಎರಡರಲ್ಲೂ ಗೆದ್ದಿರುವ ಶ್ರೀಲಂಕಾ ಹಾಗೂ ಜಿಂಬಾಬ್ವೆ ನಾಲ್ಕು ಅಂಕಗಳೊಂದಿಗೆ ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿವೆ.
ಹೀಗಾಗಿ ಈ ಹಂತದಲ್ಲಿ ಸೂಪರ್ 8ರ ಲೆಕ್ಕಾಚಾರ ಆರಂಭವಾಗಿದ್ದು, ಆಸ್ಟ್ರೇಲಿಯಾ ಈ ಹಂತಕ್ಕೆ ಪ್ರವೇಶಿಸುವುದು ಸುಲಭದ ಮಾತಲ್ಲ. ಏಕೆಂದರೆ ಆಸ್ಟ್ರೇಲಿಯಾ ಯಾರ ಮೇಲೂ ಅವಲಂಬಿತವಾಗದೇ ನೇರವಾಗಿ ಸೂಪರ್ 8 ಪ್ರವೇಶಿಸಬೇಕೆಂದರೆ ಉಳಿದ ಎರಡು ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಸೋತು ಜಿಂಬಾಬ್ವೆ ಹಾಗೂ ಶ್ರೀಲಂಕಾ ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡಗಳು ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.
ಆಸ್ಟ್ರೇಲಿಯಾ ಮುಂದಿನ ಪಂದ್ಯಗಳು:
vs ಶ್ರೀಲಂಕಾ ಫೆಬ್ರವರಿ 16
vs ಒಮನ್ ಫೆಬ್ರವರಿ 20
ಜಿಂಬಾಬ್ವೆ ಮುಂದಿನ ಪಂದ್ಯಗಳು:
vs ಐರ್ಲೆಂಡ್ ಫೆಬ್ರವರಿ 17
vs ಶ್ರೀಲಂಕಾ ಫೆಬ್ರವರಿ 19
ಶ್ರೀಲಂಕಾ ಮುಂದಿನ ಪಂದ್ಯಗಳು:
vs ಆಸ್ಟ್ರೇಲಿಯಾ ಫೆಬ್ರವರಿ 16
vs ಜಿಂಬಾಬ್ವೆ ಫೆಬ್ರವರಿ 19

