ಆಸ್ಟ್ರೇಲಿಯಾ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ತಂಡ. ಅದರಲ್ಲೂ ಐಸಿಸಿ ಟೂರ್ನಿಗಳೆಂದರೆ ಆಸ್ಟ್ರೇಲಿಯಾ ತಂಡದ ಅಬ್ಬರ ಅಷ್ಟಿಷ್ಟಲ್ಲ. ಆಸ್ಟ್ರೇಲಿಯಾ ತಂಡದಿಂದ ಇನ್ನೇನೂ ಕಪ್ ನಮ್ದೇ ಎನ್ನುತ್ತಿದ್ದ ಅದೆಷ್ಟೋ ತಂಡಗಳು ಬರಿಗೈನಲ್ಲಿ ನಿರಾಸೆಗೊಳಗಾಗಿ ಟೂರ್ನಿಯಿಂದ ಹೊರಬಂದ ಸಾಕಷ್ಟು ಉದಾಹರಣೆಗಳಿವೆ.
ಹೀಗೆ ತನ್ನದೇ ಆದ ಪಾರುಪತ್ಯ ಸಾಧಿಸಿರುವ ಆಸ್ಟ್ರೇಲಿಯಾಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಜಿಂಬಾಬ್ವೆ ಎಂದರೆ ನಡುಕ ಶುರುವಾಗಿದೆ. ಹೌದು, ಇಂದು ( ಫೆಬ್ರವರಿ 13 ) ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2026ರ ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಇದೇ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡು ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 170 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ ಓವರ್‌ಗಳಲ್ಲಿ 19.3 ಓವರ್‌ಗಳಲ್ಲಿ 146 ರನ್‌ಗೆ ಆಲ್‌ಔಟ್ ಆಗಿ ಭಾರೀ ಮುಖಭಂಗ ಅನುಭವಿಸಿದೆ.
ಈ ಮೂಲಕ ಆಸ್ಟ್ರೇಲಿಯಾ ಟಿ ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಹೌದು, ಇದು ಜಿಂಬಾಬ್ವೆ ವಿರುದ್ಧ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕಂಡ ಎರಡನೇ ಸೋಲು. ಈ ಮೂಲಕ ಜಿಂಬಾಬ್ವೆ ಚುಟುಕು ಕ್ರಿಕೆಟ್ ಸಮರದಲ್ಲಿ ಕಾಂಗರೂಗಳ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಗೆಲುವನ್ನು ದಾಖಲಿಸಿದೆ.
ಈ ಹಿಂದೆ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ನಡೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ತಂಡಗಳು 2007ರ ಸೆಪ್ಟೆಂಬರ್ 12ರಂದು ಕೇಪ್‌ಟೌನ್‌ನಲ್ಲಿ ನಡೆದಿದ್ದ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ ಕೇವಲ 138 ರನ್ ಕಲೆಹಾಕಿ ಜಿಂಬಾಬ್ವೆಗೆ 139 ರನ್‌ಗಳ ಸುಲಭ ಗುರಿಯನ್ನು ನೀಡಿತ್ತು. ಗುರಿ ಕಡಿಮೆಯಾದರೂ ರಿಕಿ ಪಾಂಟಿಂಗ್ ಅಡಿಯಲ್ಲಿ ಆಡುವ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಗೆಲ್ಲುವುದು ಅಷ್ಟರಲ್ಲಿಯೇ ಇದೆ ಎಂದು ಕ್ರಿಕೆಟ್ ಜಗತ್ತು ಊಹಿಸಿತ್ತು. ಆದರೆ ಆಶ್ಚರ್ಯವೆಂಬಂತೆ ಜಿಂಬಾಬ್ವೆ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಕಲೆಹಾಕಿ 5 ವಿಕೆಟ್‌ಗಳಿಂದ ಗೆದ್ದು ಶಾಕ್ ನೀಡಿದ್ದರು.

