ಸದ್ಯ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿ ನಡೆಯುತ್ತಿದ್ದು, ಒಟ್ಟು 20 ತಂಡಗಳು ಭಾಗವಹಿಸಿವೆ. 4 ಗುಂಪುಗಳನ್ನಾಗಿ ವಿಂಗಡಿಸಿ ಒಂದು ಗುಂಪಿನಲ್ಲಿ ತಲಾ ಐದು ತಂಡಗಳಿದ್ದು, ಎಲ್ಲ ಗುಂಪಿನಲ್ಲಿ ಟಾಪ್ 2 ಸ್ಥಾನ ಪಡೆಯುವ ತಂಡಗಳು ಸೂಪರ್ 8 ಹಂತ ತಲುಪಲಿವೆ.
ಸೂಪರ್ 8 ಬಳಿಕ ಸೆಮಿಫೈನಲ್ ಹಂತ ಶುರುವಾಗಲಿದ್ದು, ಟಾಪ್ 4 ತಂಡಗಳು ಆ ಹಂತ ತಲುಪಲಿವೆ. ಹೀಗೆ ಗ್ರೂಪ್ ಹಂತ ಹಾಗೂ ಸೂಪರ್ 8 ಎರಡರಲ್ಲೂ ಯಶಸ್ವಿಯಾಗಿ ಆಡಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಬಹುದಾದ ನಾಲ್ಕು ತಂಡಗಳು ಯಾವುವು ಎಂಬ ಊಹೆಗಳು ಗ್ರೂಪ್ ಹಂತದ ಮೊದಲ ಸುತ್ತಿನ ಪಂದ್ಯಗಳು ಮುಗಿಯುತ್ತಿದ್ದಂತೆ ಆರಂಭವಾಗಿದ್ದು, ಈ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಮಾತನಾಡಿದ್ದಾರೆ.
‘ಭಾರತ ತಂಡ ಫೇವರಿಟ್ ಆಗಿದ್ದು, ಅವರನ್ನು ನಾನು ಫೈನಲ್ ತಲುಪಲಿದ್ದಾರೆ ಎಂದು ಊಹಿಸುತ್ತಿದ್ದೇನೆ. ಒತ್ತಡ ನಿಯಂತ್ರಿಸಬಲ್ಲ ಆಸ್ಟ್ರೇಲಿಯಾ ಟಾಪ್ 4ರಲ್ಲಿ ಸ್ಥಾನ ಪಡೆಯಲಿದೆ ಎನಿಸುತ್ತದೆ. ಹಾಗಾಗಿ ನನ್ನ ಟಾಪ್ 4 ಎಂದರೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್’ ಎಂದು ‘ಬಿಯಾಂಡ್23 ಕ್ರಿಕೆಟ್ ಪಾಡ್‌ಕಾಸ್ಟ್’ನಲ್ಲಿ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
ಹೀಗೆ ಭಾರತವನ್ನು ಫೈನಲ್ ತಲುಪಲಿದೆ ಎಂದು ಭರವಸೆಯಿಂದ ಹೇಳಿದ ಮೈಕೆಲ್ ಕ್ಲಾರ್ಕ್ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಸತತ ಎರಡು ಬಾರಿ ಯಾರೂ ಟ್ರೋಫಿ ಗೆದ್ದಿಲ್ಲ ಈ ಬಾರಿ ಅದು ಆಗುವ ಸಾಧ್ಯತೆ ಇದೆ ಎಂದರು. ಸದ್ಯ ಭಾರತ ವಿಶ್ವದಲ್ಲೇ ಅತ್ಯುತ್ತಮ ಟಿ ಟ್ವೆಂಟಿ ತಂಡ, ಅವರು ನಂಬರ್ ಒನ್ ತಂಡವಾಗಿದ್ದು, ಫೇವರಿಟ್ ಆಗಿದ್ದಾರೆ ಎಂದು ಹೊಗಳಿದ್ದಾರೆ.

