HomeLatest Newsರಾತ್ರಿ ಪಾಳಿಯ ಉದ್ಯೋಗಿಗಳಿಗೆ ಗುಡ್ ನ್ಯೂಸ್ 'ಲೇಟ್ ನೈಟ್ ಈಟ್ಸ್' ಸೇವೆ ಆರಂಭಿಸಿದ ಸ್ವಿಗ್ಗಿ

ರಾತ್ರಿ ಪಾಳಿಯ ಉದ್ಯೋಗಿಗಳಿಗೆ ಗುಡ್ ನ್ಯೂಸ್ ‘ಲೇಟ್ ನೈಟ್ ಈಟ್ಸ್’ ಸೇವೆ ಆರಂಭಿಸಿದ ಸ್ವಿಗ್ಗಿ

ಬೆಂಗಳೂರು: ದೇಶದ ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿಯವರೆಗೂ ಆಫೀಸ್‌ನಲ್ಲಿ ಕೆಲಸ ಮಾಡುವ ಐಟಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಸ್ವಿಗ್ಗಿ ಭರ್ಜರಿ ಸಿಹಿ ಸುದ್ದಿ ನೀಡಿದೆ. ನಡುರಾತ್ರಿಯಲ್ಲಿ ಹೊಟ್ಟೆ ಹಸಿವಾದರೆ ಯಾವ ಹೋಟೆಲ್ ಓಪನ್ ಇರುತ್ತೆ? ಊಟ ಎಲ್ಲಿಂದ ಆರ್ಡರ್ ಮಾಡೋದು? ಎಂಬ ಚಿಂತೆ ಇನ್ಮುಂದೆ ಬೇಡ. ರಾತ್ರಿ ಪಾಳಿಯಲ್ಲಿ (Night Shift) ದುಡಿಯುವವರಿಗಾಗಿಯೇ ಭಾರತದ ಪ್ರಮುಖ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ, ಲೇಟ್ ನೈಟ್ ಈಟ್ಸ್ (Late Night Eats) ಎಂಬ ಹೊಸ ವಿಶೇಷ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಜಾಗತಿಕ ಮಟ್ಟದ ಕೆಲಸದ ವೇಳಾಪಟ್ಟಿಗೆ ತಕ್ಕಂತೆ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ತಡರಾತ್ರಿಯವರೆಗೆ ಕೆಲಸ ಮಾಡುವ ಟೆಕ್ಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು, ಕೈಗೆಟುಕುವ ಬೆಲೆಯಲ್ಲಿ, ಅತ್ಯಂತ ವೇಗವಾಗಿ ಮತ್ತು ಉತ್ತಮ ಗುಣಮಟ್ಟದ ಆಹಾರವನ್ನು ತಡರಾತ್ರಿಯಲ್ಲೂ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸ್ವಿಗ್ಗಿ ಈ ಮಹತ್ವದ ಹೆಜ್ಜೆ ಇಟ್ಟಿದೆ.

30 ನಗರ, 4,000 ಕಚೇರಿಗಳು

ಈ ‘ಲೇಟ್ ನೈಟ್ ಈಟ್ಸ್’ ಸೇವೆಯು ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಲಭ್ಯವಿರಲಿದೆ. ಭಾರತದ ಪ್ರಮುಖ 30 ನಗರಗಳಲ್ಲಿರುವ 4,000ಕ್ಕೂ ಹೆಚ್ಚು ಕಾರ್ಪೊರೇಟ್ ಕಚೇರಿಗಳು ಹಾಗೂ 30,000ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳನ್ನು ಇದು ಒಳಗೊಂಡಿದೆ. ಬರ್ಗರ್ ಕಿಂಗ್, ಡೊಮಿನೋಸ್ ಪಿಜ್ಜಾ, ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಹಾಗೂ ಸಬ್‌ವೇ ನಂತಹ ಟಾಪ್ ಬ್ರ್ಯಾಂಡ್‌ಗಳ ಆಹಾರಗಳೂ ಇಲ್ಲಿ ಸಿಗಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಜೊತೆಗೆ, ರಾತ್ರಿ 2 ಗಂಟೆಯವರೆಗೂ ಕಡ್ಡಾಯವಾಗಿ ತೆರೆದಿರುವ ಹೋಟೆಲ್‌ಗಳನ್ನೊಳಗೊಂಡ ʼ2 ಎಎಂ ಕ್ಲಬ್‌ʼ ಎಂಬ ವಿಶೇಷ ಆಯ್ಕೆಯನ್ನೂ ಸ್ವಿಗ್ಗಿ ಪರಿಚಯಿಸಿದೆ. ಇದರಿಂದಾಗಿ ತಡರಾತ್ರಿಯಲ್ಲೂ ಕಡ್ಡಾಯವಾಗಿ ಊಟ ಸಿಗುವ ಖಾತರಿಯನ್ನು ಗ್ರಾಹಕರಿಗೆ ನೀಡಲಾಗಿದೆ.

ಡೆಸ್ಕ್‌-ಈಟ್ಸ್: ಕೆಲಸ ಮಾಡುತ್ತಲೇ ತಿನ್ನಲು ವಿಶೇಷ ಮೆನು

ಆಫೀಸ್ ಡೆಸ್ಕ್ ಮೇಲೆ ಕೆಲಸ ಮಾಡುತ್ತಲೇ ಸುಲಭವಾಗಿ ತಿನ್ನಲು ಅನುಕೂಲವಾಗುವಂತೆ ವಿಶೇಷ ಮೆನುಗಳನ್ನೂ ಸ್ವಿಗ್ಗಿ ಪರಿಚಯಿಸಿದೆ.

ಒನ್‌ ಹ್ಯಾಂಡೆಡ್‌ ಗ್ರ್ಯಾಬೀಸ್‌ : ಒಂದು ಕೈಯಲ್ಲಿ ತಿನ್ನಬಹುದಾದ ರೋಲ್ಸ್, ವ್ರ್ಯಾಪ್ಸ್.

ಹೆಲ್ದಿ ನಿಬಲ್ಸ್‌ : ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ಗ್ರೇನ್ ಬೌಲ್ಸ್, ಸಲಾಡ್.

ಸಿಪ್‌ ಟಾಸ್ಟಿಕ್‌ ಫ್ಯುಯೆಲ್‌ : ನಿದ್ದೆ ಬಾರದಂತೆ ತಡೆಯಲು ಕಾಫಿ, ಟೀ, ಶೇಕ್ಸ್.

ಸ್ಟ್ರೆಸ್‌ ಮಂಚೀಸ್‌ : ಕೆಲಸದ ಒತ್ತಡ ಕಡಿಮೆ ಮಾಡಲು ಫ್ರೆಂಚ್ ಫ್ರೈಸ್, ಸ್ನ್ಯಾಕ್ಸ್.

ಟೀಂವರ್ಕ್‌ ಬೈಟ್ಸ್‌ : ಇಡೀ ಟೀಮ್ ಒಟ್ಟಿಗೆ ಸೇರಿ ತಿನ್ನಲು ಪಿಜ್ಜಾ.

ಟಿಯರ್‌-2 ನಗರಗಳಲ್ಲೂ ಹೆಚ್ಚಿದ ಟ್ರೆಂಡ್

ಸ್ವಿಗ್ಗಿ ಬಿಡುಗಡೆ ಮಾಡಿರುವ ಡೇಟಾದ ಪ್ರಕಾರ, ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡುವ ಶೇ. 25ರಷ್ಟು ಉದ್ಯೋಗಿಗಳು ರಾತ್ರಿ 10 ಗಂಟೆಯ ನಂತರವೇ ಊಟ ಆರ್ಡರ್ ಮಾಡುತ್ತಾರೆ ಅಚ್ಚರಿಯ ವಿಚಾರವೆಂದರೆ, ಕೇವಲ ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲದೆ, ಭುವನೇಶ್ವರ, ಗೋವಾ, ಕೊಚ್ಚಿ, ಲಕ್ನೋ, ವೈಜಾಗ್ ಮತ್ತು ಅಹಮದಾಬಾದ್‌ನಂತಹ ಟಿಯರ್‌-2 ನಗರಗಳಲ್ಲೂ ತಡರಾತ್ರಿಯ ಆರ್ಡರ್‌ಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ.

ಈ ಹೊಸ ಸೇವೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಫುಡ್ ಸ್ಟ್ರಾಟಜಿ ವಿಭಾಗದ ಉಪಾಧ್ಯಕ್ಷ ದೀಪಕ್ ಮಾಲೂ, “ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳು ತಡರಾತ್ರಿಯವರೆಗೂ ಕೆಲಸ ಮಾಡುವುದು ಹೆಚ್ಚಾಗಿದೆ. ಹೀಗಾಗಿ ರಾತ್ರಿ 10 ಗಂಟೆ ನಂತರದ ಆರ್ಡರ್‌ಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಇದನ್ನು ಗಮನಿಸಿ, ಆಫೀಸ್ ಉದ್ಯೋಗಿಗಳಿಗೆ ವೇಗವಾಗಿ ಹಾಗೂ ರಿಯಾಯಿತಿ ದರದಲ್ಲಿ ಊಟ ತಲುಪಿಸಲು ಈ ‘ಲೇಟ್ ನೈಟ್ ಈಟ್ಸ್’ ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲಿದ್ದೇವೆ,” ಎಂದು ತಿಳಿಸಿದರು.

ಈ ಹೊಸ ಸೇವೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬೆಂಗಳೂರಿನ ಓರ್ವ ಪ್ರೋಗ್ರಾಮ್ ಮ್ಯಾನೇಜರ್, “ನಾನು ಆಗಾಗ ಜಾಗತಿಕ ತಂಡಗಳಿಗೆ ಬೆಂಬಲ ನೀಡಲು ತಡರಾತ್ರಿ ಕೆಲಸ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಊಟಕ್ಕೆ ಒಳ್ಳೆಯ ಹೋಟೆಲ್‌ಗಳು ಸಿಗುತ್ತಿರಲಿಲ್ಲ. ಇದೀಗ ಸ್ವಿಗ್ಗಿಯ ಈ ಹೊಸ ಆಯ್ಕೆ, ಆಫರ್‌ಗಳು ಮತ್ತು ವೇಗದ ಡೆಲಿವರಿಯಿಂದ ನನಗೆ ಬಹಳ ಸಹಾಯವಾಗಿದೆ,” ಎಂದಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular