‘ಸ್ವಚ್ಛ ಕೊಡಗು-ಸುಂದರ ಕೊಡಗು’ ಹೆಸರಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನವು ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ, ಪ್ರವಾಸೋದ್ಯಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಪಾಲುದಾರರು ಹಾಗೂ ಇತರರ ಸಹಕಾರದಲ್ಲಿ ಸ್ವಚ್ಚ ಹಾಗೂ ಸುಂದರ ಕೊಡಗು ಅಭಿಯಾನ ನಡೆಯಿತು. ಪ್ರವಾಸಿ ತಾಣಗಳಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಸಂಗ್ರಹ ಮಾಡಲಾಯಿತು.
ರಾಜಾಸೀಟು ಉದ್ಯಾನವನದಲ್ಲಿ ಅಭಿಯಾನಕ್ಕೆ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್ ಮುಂತಾದವರು ಚಾಲನೆ ನೀಡಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, “ಮಡಿಕೇರಿ ನಗರದಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಬಾಟಲಿ ನೀರನ್ನು ನಿಷೇಧಿಸಲಾಗಿದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ನಿಯಂತ್ರಣಕ್ಕೆ ಬಂದಿದೆ. ಅದೇ ರೀತಿ ಮುಂದುವರೆಯಬೇಕು. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು” ಎಂದರು.
ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ, “ಕೊಡಗು ಜಿಲ್ಲಾ, ತಾಲ್ಲೂಕು ಹಾಗೂ ಪ್ರವಾಸಿ ಸ್ಥಳಗಳು ಸೇರಿದಂತೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಚ್ಚಹಸಿರಿನ ಕೊಡಗು ಮತ್ತಷ್ಟು ಸುಂದರವಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ” ಎಂದು ಹೇಳಿದರು.
ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಇಂತಹ ಅಭಿಯಾನದಿಂದ ಪ್ರವಾಸಿ ತಾಣಗಳನ್ನು ಸ್ವಚ್ಛಗೊಳಿಸಲಾಗಿದೆ. ಪ್ರವಾಸಿಗರು ಸಹ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕರೆ ನೀಡಲಾಗಿದೆ.
ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲ, ಪ್ರವಾಸಿ ಸ್ಥಳಗಳಾದ ಮಡಿಕೇರಿ ತಾಲ್ಲೂಕಿನ ಅಬ್ಬಿ ಜಲಪಾತ, ನಾಲ್ಕುನಾಡು ಅರಮನೆ, ರಾಜರ ಗದ್ದುಗೆ, ರಾಜಾಸೀಟು, ಕೋಟೆ, ಅಬ್ಬಿ ಜಲಪಾತ, ಚೇಲಾವರ ಜಲಪಾತ.
ಕುಶಾಲನಗರ ತಾಲ್ಲೂಕಿನ ದುಬಾರೆ ರಿವರ್ ರ್ಯಾಫ್ಟಿಂಗ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಹಾರಂಗಿ ಉದ್ಯಾನವನ ಆನೆ ಶಿಬಿರ ಮತ್ತು ಹಿನ್ನೀರಿನ ಸಾಹಸ ಕ್ರೀಡೆ ಸ್ಥಳಗಳು, ಚಿಕ್ಲಿ ಹೊಳೆ. ಸೋಮವಾರಪೇಟೆ ತಾಲ್ಲೂಕಿನ ಹೊನ್ನಮ್ಮ ಕೆರೆ, ಮಕ್ಕಳ ಗುಡಿ ಬೆಟ್ಟ, ಕೋಟೆ ಬೆಟ್ಟ, ಸೂರ್ಲಬ್ಬಿ ಜಲಪಾತ ಮತ್ತು ಮಲ್ಲಳ್ಳಿ ಜಲಪಾತ. ಹಾಗೆಯೇ ಪೊನ್ನಂಪೇಟೆ ತಾಲ್ಲೂಕಿನ ಬರ್ಪುಹೊಳೆ ರಿವರ್ ರ್ಯಾಫ್ಟಿಂಗ್ ಮತ್ತು ಇರ್ಪು ಜಲಪಾತ ಇಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಹಾಗೆಯೇ ಮಡಿಕೇರಿ ನಗರದಲ್ಲಿ ವಿರಾಜಪೇಟೆ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ(ಮಂಗಳೂರು ರಸ್ತೆ), ಮಡಿಕೇರಿ-ಸಿದ್ದಾಪುರ ರಸ್ತೆ ಮತ್ತು ಮಡಿಕೇರಿ-ಮೈಸೂರು ರಸ್ತೆ ಈ ವ್ಯಾಪ್ತಿಯ 2 ಕಿ,.ಮೀ ವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ಕಾವೇರಿ ನಿಸರ್ಗಧಾಮ ಎನ್.ಟಿ.ಸಿ ಹಾಗೂ ಕೂರ್ಗ್ ರಿವೇರ್ ರೆಸಾರ್ಟ್ ಇದರ ಸಹಯೋಗದಿಂದ ಹಾಗೂ ಅರಣ್ಯ ಅಧಿಕಾರಿಗಳು ಇವರೆಲ್ಲರ ಸಹಯೋಗದಿಂದ ಸುಮಾರು 50 ಜನರು ಕಾವೇರಿ ನಿಸರ್ಗಧಾಮ ಮುಂಭಾಗದಿಂದ ಗುಡ್ಡೆಹೊಸೂರು ರೋಡು ಮಾರ್ಗವಾಗಿ ಎಡಕ್ಕೂ ಹಾಗೂ ಬಲಕ್ಕೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

