ಇಂದು ( ಜೂನ್ 6 ) ಬಿಸಿಸಿಐ ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿತು. ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ನಾಯಕತ್ವವನ್ನು ಕಳೆದುಕೊಂಡಿದ್ದು, ಬಿಸಿಸಿಐ ಶ್ರೇಯಸ್ ಐಯ್ಯರ್ ಪಾಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿದೆ.
ಹೀಗೆ ಇದೇ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್‌ಗೆ ಬಿಸಿಸಿಐ ಆಟಗಾರರು ಶಾಕ್ ಕೊಟ್ಟಿದ್ದು, ನಾಯಕತ್ವ ಕಸಿದುಕೊಳ್ಳುವುದು ಮಾತ್ರವಲ್ಲದೇ ಆಟಗಾರನಾಗಿಯೂ ಸಹ ತಂಡದಲ್ಲಿ ಮುಂದುವರಿಸುತ್ತಿಲ್ಲ.
ಹೀಗೆ ಭಾರೀ ಹಿನ್ನಡೆ ಅನುಭವಿಸಿದ ದಿನವೇ ಸೂರ್ಯಕುಮಾರ್ ಯಾದವ್ ತನ್ನ ಜಾಗಕ್ಕೆ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಐಯ್ಯರ್ ಎದುರು ಮುಖಾಮುಖಿಯಾಗಿದ್ದಾರೆ. ಹೌದು, ಪ್ರಸ್ತುತ ನಡೆಯುತ್ತಿರುವ ಮುಂಬೈ ಟಿ ಟ್ವೆಂಟಿ ಲೀಗ್ ಟೂರ್ನಿಯ 12ನೇ ಪಂದ್ಯ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟ್ರಂಪ್ಸ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ ಹಾಗೂ ಮುಂಬೈ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿವೆ.
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಟ್ರಂಪ್ಸ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, ಶ್ರೇಯಸ್ ಐಯ್ಯರ್ ಮುಂಬೈ ಫಾಲ್ಕನ್ಸ್ ತಂಡದ ಪರ ಆಟಗಾರನಾಗಿ ಕಣಕ್ಕಿಳಿದಿದ್ದಾರೆ.
ಹೀಗೆ ಶ್ರೇಯಸ್ ಮುಖಾಮುಖಿಯಾದ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಸ್ವತಃ ಸೂರ್ಯಕುಮಾರ್ ಯಾದವ್ ನಾಯಕತ್ವ ಬದಲಾವಣೆಯಾಗಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ‘ಶ್ರೇಯಸ್ ಐಯ್ಯರ್ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನಾವಿಬ್ಬರೂ ಒಟ್ಟಿಗೆ ಮುಂಬೈನಲ್ಲಿ ಹೆಚ್ಚು ಕ್ರಿಕೆಟ್ ಆಡಿದ್ದು, ಭಾರತ ತಂಡದ ಕೊನೆಯ ಮೂವರು ಟಿ ಟ್ವೆಂಟಿ ನಾಯಕರು ಮುಂಬೈನವರು ಎಂಬುದು ಖುಷಿಯ ವಿಚಾರ’ ಎಂದಿದ್ದಾರೆ.

