ಬೆಂಗಳೂರು: ಕಾಂಗ್ರೆಸ್ ಪತ್ರಶೀರ್ಷಿಕೆ (ಲೆಟರ್‌ಹೆಡ್)ಯಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಹುದ್ದೆಗಳಿಗೆ ಹೆಸರು ಆಯ್ಕೆ ಮಾಡಿ ಪ್ರಕಟಿಸುವ ಮೂಲಕ ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ಪಕ್ಷ ನಾಂದಿ ಹಾಡಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಮತ್ತು ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ಅತ್ಯುನ್ನತ ಸಾಂವಿಧಾನಿಕ ಸ್ಥಾನಗಳಾಗಿವೆ. ಈ ಹುದ್ದೆಗಳು ತಮ್ಮದೇ ಆದ ಘನತೆ, ಗೌರವ, ನಿಷ್ಪಕ್ಷಪಾತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸುವ ಪರಂಪರೆಯನ್ನು ಹೊಂದಿವೆ. ಆದರೆ, ಕಾಂಗ್ರೆಸ್ ತನ್ನ ಅಧಿಕೃತ ಪಕ್ಷದ ಲೆಟರ್‌ಹೆಡ್ ನಲ್ಲಿ ಈ ಸಾಂವಿಧಾನಿಕ ಹುದ್ದೆಗಳ ಹೆಸರನ್ನು ಬಳಸಿರುವುದು ಆಕ್ಷೇಪಾರ್ಹ. ಇಂತಹ ನಡೆ ಈ ಹುದ್ದೆಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ಘನತೆ ಮತ್ತು ಗೌರವಕ್ಕೂ ಕಳಂಕ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಮುಂದೆ ಆಯ್ಕೆಯಾಗಬೇಕಿರುವ ಸಭಾಧ್ಯಕ್ಷರ, ಉಪಸಭಾಧ್ಯಕ್ಷರ, ಸಭಾಪತಿಗಳ ಹಾಗೂ ಉಪ ಸಭಾಪತಿಗಳ ಹೆಸರುಗಳನ್ನು ಆಳುವ ಪಕ್ಷದ ಲೆಟರ್‌ಹೆಡ್‌ನಲ್ಲಿ ದೆಹಲಿಯಿಂದಲೇ ಕಳುಹಿಸುತ್ತಿರುವುದು ಇದೇ ಮೊದಲ ಬಾರಿ. ಇದು ಕೇವಲ ಸಂಸದೀಯ ಸಂಪ್ರದಾಯಗಳ ಉಲ್ಲಂಘನೆ ಮಾಅತ್ರವಲ್ಲ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನಿರ್ಲಕ್ಷ್ಯದ ಪ್ರತೀಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

