ನವದೆಹಲಿ: ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟ ಮಾಡುವ ಪೆಟ್ರೋಲ್‌ನಲ್ಲಿ ಎಷ್ಟು ಶೇಕಡಾ ಎಥನಾಲ್ ಮಿಶ್ರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಹಾಗೂ ಪೆಟ್ರೋಲ್ ಬಿಲ್, ರಸೀದಿಗಳಲ್ಲೂ ಎಥನಾಲ್ ಪ್ರಮಾಣ ನಮೂದಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು, ಸಂವಿಧಾನದ ಆರ್ಟಿಕಲ್ 32 ಅಡಿಯಲ್ಲಿ ಸಲ್ಲಿಸಿದ್ದ ಈ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಅಲ್ಲದೆ, ಅರ್ಜಿದಾರ ನರೇಂದ್ರ ಕುಮಾರ್ ಗೋಸ್ವಾಮಿ ಅವರಿಗೆ ತಮ್ಮ ಅಹವಾಲುಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್‌ನ್ನು ಸಂಪರ್ಕಿಸಲು ಅವಕಾಶ ನೀಡಿತು.
ಅರ್ಜಿಯಲ್ಲಿ ಏನು ಕೋರಲಾಗಿತ್ತು?
ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿರುವ ಇಂಧನ ವಿತರಿಸುವ ನೋಜಲ್‌ಗಳಲ್ಲಿ ಪೆಟ್ರೋಲ್‌ನಲ್ಲಿರುವ ನಿಖರ ಎಥನಾಲ್ ಪ್ರಮಾಣವನ್ನು ಸ್ಪಷ್ಟವಾಗಿ ಮತ್ತು ಏಕರೂಪವಾಗಿ ಪ್ರದರ್ಶಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಅದೇ ರೀತಿ, ಗ್ರಾಹಕರಿಗೆ ನೀಡುವ ಪ್ರತಿಯೊಂದು ಇಂಧನ ಬಿಲ್, ರಸೀದಿ ಅಥವಾ ಇನ್‌ವಾಯ್ಸ್‌ನಲ್ಲಿ ಪೆಟ್ರೋಲ್‌ನಲ್ಲಿ ಒಳಗೊಂಡಿರುವ ಎಥನಾಲ್‌ನ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಮನವಿ ಮಾಡಲಾಗಿತ್ತು.
“ರಸೀದಿಯನ್ನು ನೋಡಿ, ಅದರಲ್ಲಿ ಎಥನಾಲ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಖರೀದಿಸುತ್ತಿರುವ ಇಂಧನದ ಬಗ್ಗೆ ತಿಳಿದುಕೊಳ್ಳುವ ಹಕ್ಕು ನನಗಿದೆ,” ಎಂದು ಗೋಸ್ವಾಮಿ ನ್ಯಾಯಾಲಯದಲ್ಲಿ ವಾದಿಸಿದ್ದರು.
ವಾಹನಗಳಿಗೆ ಹೊಂದುವ ಎಥನಾಲ್ ಪ್ರಮಾಣದ ಮಾಹಿತಿ ನೀಡುವಂತೆ ಮನವಿ
ವಾಹನ ತಯಾರಕ ಸಂಸ್ಥೆ, ಮಾದರಿ, ಎಂಜಿನ್ ಪ್ರಕಾರ ಮತ್ತು ತಯಾರಾದ ವರ್ಷದ ಆಧಾರದ ಮೇಲೆ ಯಾವ ವಾಹನಕ್ಕೆ ಯಾವ ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್ ಸೂಕ್ತ ಎಂಬುದನ್ನು ತಿಳಿಸುವ ಸಾರ್ವಜನಿಕವಾಗಿ ಲಭ್ಯವಿರುವ ಅಧಿಕೃತ ಡೇಟಾಬೇಸ್ ಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗಾಗಿ ಪಾರದರ್ಶಕ ಪರಿವರ್ತನಾ ವ್ಯವಸ್ಥೆ ರೂಪಿಸಬೇಕು. ತಾಂತ್ರಿಕ, ಆರ್ಥಿಕ ಮತ್ತು ಲಾಜಿಸ್ಟಿಕ್ ದೃಷ್ಟಿಯಿಂದ ಸಾಧ್ಯವಿರುವ ಕಡೆಗಳಲ್ಲಿ ಕಡಿಮೆ ಎಥನಾಲ್ ಹೊಂದಿರುವ ಪೆಟ್ರೋಲ್ ಲಭ್ಯವಾಗುವಂತೆ ಮಾಡಬೇಕು ಎಂಬ ಬೇಡಿಕೆಯೂ ಇತ್ತು.
E20 ಪೆಟ್ರೋಲ್ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆಗೆ ಮನವಿ
ಪೆಟ್ರೋಲಿಯಂ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಭಾರತೀಯ ಮಾನದಂಡಗಳ ಬ್ಯೂರೋ (BIS), ARAI/ICAT, ಗ್ರಾಹಕ ಸಂಘಟನೆಗಳು, ಆಟೋಮೊಬೈಲ್ ಎಂಜಿನಿಯರ್‌ಗಳು, ಇಂಧನ ತಂತ್ರಜ್ಞಾನ ತಜ್ಞರು, ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಹಾಗೂ ಜಲ ಸಂಪನ್ಮೂಲ ತಜ್ಞರನ್ನು ಒಳಗೊಂಡ ಸ್ವತಂತ್ರ ತಜ್ಞರ ಸಮಿತಿ ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಈ ಸಮಿತಿಯು ಭಾರತದಲ್ಲಿರುವ ಹಳೆಯ ವಾಹನಗಳಿಗೆ E20 ಪೆಟ್ರೋಲ್‌ನ ಹೊಂದಾಣಿಕೆ, ಇಂಧನ ದಕ್ಷತೆ, ಎಂಜಿನ್ ಬಾಳಿಕೆ, ನಿರ್ವಹಣಾ ವೆಚ್ಚ, ವಾರಂಟಿ ಮತ್ತು ವಿಮೆ, ಪರಿಸರದ ಮೇಲಿನ ಪರಿಣಾಮ, ಎಥನಾಲ್ ಉತ್ಪಾದನೆಗೆ ಬೇಕಾಗುವ ನೀರಿನ ಪ್ರಮಾಣ ಹಾಗೂ ಆಹಾರ ಭದ್ರತೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿತ್ತು.
ಇದಲ್ಲದೆ, E20 ಪೆಟ್ರೋಲ್ ಕಡ್ಡಾಯವಾಗಿ ಜಾರಿಗೊಳಿಸುವ ನಿರ್ಧಾರದ ಆಧಾರವಾಗಿರುವ ನೀತಿ ದಾಖಲೆಗಳು, ತಾಂತ್ರಿಕ ಅಧ್ಯಯನಗಳು, ವಾಹನ ಹೊಂದಾಣಿಕೆ ವರದಿಗಳು, ಸುರಕ್ಷತಾ ಮಾನದಂಡಗಳು, ಗ್ರಾಹಕರಿಗೆ ನೀಡಲಾದ ಸಲಹೆಗಳು ಹಾಗೂ ಸಾರ್ವಜನಿಕ ಸಮಾಲೋಚನೆಯ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
‘ಎಥನಾಲ್ ಮಿಶ್ರಣ ಕಾರ್ಯಕ್ರಮ ಒಂದು ಪ್ರಯೋಗ’ ಎಂದಿದ್ದರೇ?
ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಹಿಂದಿನ ವಿಚಾರಣೆಯೊಂದರಲ್ಲಿ ಅಟಾರ್ನಿ ಜನರಲ್ ಅವರು “ಪ್ರಯೋಗ” ಎಂದು ಹೇಳಿದ್ದರು ಎಂದು ಅರ್ಜಿದಾರರು ಉಲ್ಲೇಖಿಸಿದ್ದರು. ಆದರೆ ನಂತರ ಕೇಂದ್ರ ಸರ್ಕಾರ ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿತ್ತು.ಈ ವಿಚಾರದಲ್ಲಿ ಕೇಂದ್ರದಿಂದ ಸ್ಪಷ್ಟ ಭರವಸೆ ನೀಡುವಂತೆ ಗೋಸ್ವಾಮಿ ಮನವಿ ಮಾಡಿದ್ದರು.

