ನವದೆಹಲಿ: ದೆಹಲಿಯ ಡೇ ಕೇರ್ನಲ್ಲಿ 3 ವರ್ಷದ ಬಾಲಕನಿಗೆ ಅಮಾನವೀಯವಾಗಿ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಬಾಲಕನನ್ನು ಕುರ್ಚಿಗೆ ಕಟ್ಟಿ ಗಂಟೆಗಟ್ಟಲೆ ಶಿಕ್ಷಕಿ ಹಾಗೂ ಕೇರ್ಟೇಕರ್ ಥಳಿಸಿದ್ದಾರೆ ಎನ್ನಲಾಗಿದ್ದು, ಈ ದೃಶ್ಯಗಳು CCTVಯಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ದೆಹಲಿ ಪೊಲೀಸರು POCSO ಕಾಯ್ದೆಯಡಿ ಪ್ರಕರಣ ದಾಖಲಿಸಿ, ಓರ್ವ ಕೇರ್ಟೇಕರ್ನನ್ನು ಬಂಧಿಸಿದ್ದಾರೆ.
ಹೌದು,ದೆಹಲಿಯ ಡೇ ಕೇರ್ವೊಂದರಲ್ಲಿ 3 ವರ್ಷದ ಬಾಲಕನನ್ನು ಕುರ್ಚಿಗೆ ಕಟ್ಟಿ ಗಂಟೆಗಟ್ಟಲೆ ಥಳಿಸಲಾಗಿದೆ . ಈ ಘಟನೆ ಈಶಾನ್ಯ ದೆಹಲಿಯ ಮೌಜ್ಪುರ ಪ್ರದೇಶದಲ್ಲಿರುವ ಮಾಕೂನ್ಸ್ ಪ್ಲೇ ಸ್ಕೂಲ್ನಲ್ಲಿ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು POCSO ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಓರ್ವ ಕೇರ್ಟೇಕರ್ನನ್ನು ಬಂಧಿಸಿದ್ದಾರೆ.
ಕುರ್ಚಿಯಲ್ಲಿ ಕುಳಿತಿದ್ದ ಬಾಲಕನನ್ನು ಶಿಕ್ಷಕಿಯೊಬ್ಬರು ಕಾಲಿನಿಂದ ತಳ್ಳುತ್ತಿರುವುದು ಹಾಗೂ ಬಳಿಕ ಆತನಿಗೆ ಹೊಡೆಯುತ್ತಿರುವ ದೃಶ್ಯಗಳು ಶಾಲೆಯ CCTV ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಕುಟುಂಬ ಆರೋಪಿಸಿದೆ.
ಕಿವಿ ನೋವಿನಿಂದ ಘಟನೆ ಬೆಳಕಿಗೆ
3 ವರ್ಷದ ಬಾಲಕ ಕಿವಿ ನೋವು ಎಂದು ಪೋಷಕರಿಗೆ ತಿಳಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಮುಖ ಮತ್ತು ಕೈಗಳ ಮೇಲೆ ಗಾಯದ ಗುರುತುಗಳನ್ನೂ ಪೋಷಕರು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಾಗ, ಬಾಲಕನ ಎರಡೂ ಕಿವಿ ಪರದೆಗಳು ಊದಿಕೊಂಡಿದ್ದು, ಗಾಯಗಳು ದೈಹಿಕ ಹಲ್ಲೆಯಿಂದ ಉಂಟಾಗಿರುವಂತೆ ಕಂಡುಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
CCTV ಪಡೆಯಲು ₹1,500 ಕೇಳಿದ ಆರೋಪ
ಪೋಷಕರು ಶಾಲಾ ಆಡಳಿತವನ್ನು ಸಂಪರ್ಕಿಸಿ ಬಾಲಕನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಶಾಲಾ ಆಡಳಿತವು ಆರಂಭದಲ್ಲಿ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ ಎಂದು ನಿರಾಕರಿಸಿದೆ ಎನ್ನಲಾಗಿದೆ.ಬಳಿಕ ಪೋಷಕರು ತರಗತಿಯ CCTV ದೃಶ್ಯಗಳನ್ನು ಕೇಳಿದ್ದಾರೆ. ಬಾಲಕನ ತಂದೆಯ ಆರೋಪದ ಪ್ರಕಾರ, CCTV ಲಾಗಿನ್ ಹಾಗೂ ದೃಶ್ಯಗಳನ್ನು ಪಡೆಯಲು ಶಾಲಾ ಆಡಳಿತ ₹1,500 ಪಾವತಿಸುವಂತೆ ಕೇಳಿತ್ತು. ಹಣ ಪಾವತಿಸಿದ ಬಳಿಕ CCTV ದೃಶ್ಯಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂರು ದಿನಗಳ CCTV ದೃಶ್ಯ ಪರಿಶೀಲಿಸಿದ ತಾಯಿ
ಬಾಲಕನ ತಾಯಿ ಆಗಸ್ಟ್ 16, 17 ಮತ್ತು 18ರಂದು ದಾಖಲಾಗಿದ್ದ CCTV ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಕುಟುಂಬದ ಪ್ರಕಾರ, ದೃಶ್ಯಗಳಲ್ಲಿ ಬಾಲಕನನ್ನು ಏಪ್ರನ್ನಿಂದ ಕುರ್ಚಿಗೆ ಕಟ್ಟಿ ಹಾಕಿರುವುದು, ಶಿಕ್ಷಕಿ ಹಾಗೂ ಕೇರ್ಟೇಕರ್ ಬಾಲಕನಿಗೆ ದೈಹಿಕವಾಗಿ ಹಿಂಸೆ ನೀಡುತ್ತಿರುವುದು ಕಂಡುಬಂದಿದೆ.
ಬಾಲಕನ ತಂದೆ ನೀಡಿದ ಹೇಳಿಕೆಯಲ್ಲಿ, ಮೂರು ಗಂಟೆಗಳ ಕಾಲ ಆತನನ್ನು ಕಟ್ಟಿ ಹಾಕಿ ನಿರಂತರವಾಗಿ ಹೊಡೆಯಲಾಗಿದೆ” ಎಂದು ಆರೋಪಿಸಿದ್ದಾರೆ.ಈ ಪ್ರಕರಣದಲ್ಲಿ ಶಾಲೆಯ ನಿರ್ದೇಶಕಿ ಸುನೀತಾ ಬನ್ಸಾಲ್, ಪ್ರಾಂಶುಪಾಲೆ ನೀಲಂ ಹಾಗೂ ಶಿಕ್ಷಕಿಯರಾದ ಸಿಮ್ರಾನ್ ಮತ್ತು ಪೂಜಾ ಸೇರಿದಂತೆ ನಾಲ್ವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

