ಪ್ರಾವಿಡೆಂಟ್ ಫಂಡ್ (EPFO) ಹಾಗೂ ಆದಾಯ ತೆರಿಗೆ (ITR) ದಾಖಲೆಗಳಲ್ಲಿರುವ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಖಾಸಗಿ ಸಂಸ್ಥೆಗಳು ಸುಲಭವಾಗಿ ಪ್ರವೇಶಿಸುತ್ತಿರುವ ಬಗ್ಗೆ ಭಾರತದ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಪಿಎಫ್ ಮತ್ತು ಐಟಿ ಡೇಟಾವನ್ನು ವಿಶ್ಲೇಷಿಸಿ ಪರಿಶೀಲಿಸುವ ವಾಣಿಜ್ಯ ತಂತ್ರಜ್ಞಾನ ವ್ಯವಸ್ಥೆಗಳ ವಿಸ್ತರಣೆ ಸಾರ್ವಭೌಮ ಡೇಟಾ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಾನೂನುಬದ್ಧವಾಗಿ ಸರ್ಕಾರಕ್ಕೆ ಸಲ್ಲಿಸುವ ವೈಯಕ್ತಿಕ ಮಾಹಿತಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಕೈಗೆ ಸಿಕ್ಕು ದುರ್ಬಳಕೆಯಾಗದಂತೆ ಸೂಕ್ತ ಸುರಕ್ಷತಾ ಕ್ರಮಗಳು ಹಾಗೂ ವ್ಯವಸ್ಥೆಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರನ್ನೊಳಗೊಂಡ ಪೀಠವು ಸೋಮವಾರ ಪಿಯೂಷ್ ಶರ್ಮಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆಗೆ ಸ್ವೀಕರಿಸಿತು.
ನಾಗರಿಕರು ತಮ್ಮ ಕಾನೂನುಬದ್ಧ ಕರ್ತವ್ಯಗಳ ಭಾಗವಾಗಿ ಸರ್ಕಾರಿ ಅಧಿಕಾರಿಗಳಿಗೆ ನೀಡುವ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡುವುದು ಆತಂಕಕಾರಿ ಸಂಗತಿ ಎಂದು ನ್ಯಾಯಪೀಠ ಹೇಳಿದೆ. ಈ ಸಮಸ್ಯೆ ಕುರಿತು ಸೂಕ್ತ ನೀತಿ ರೂಪಿಸಲು ವಿವಿಧ ಕ್ಷೇತ್ರಗಳ ತಜ್ಞರ ನೆರವಿನಿಂದ ಕೇಂದ್ರ ಸರ್ಕಾರ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಸಿಜೆಐ ಸೂಚಿಸಿದರು.
PAN, UAN ಮಾಹಿತಿ ನೀಡಿದರೆ ಸಂಪೂರ್ಣ ಉದ್ಯೋಗ ಇತಿಹಾಸ ಬಹಿರಂಗ?
ವಿಚಾರಣೆ ವೇಳೆ ಅರ್ಜಿದಾರರು ತಮ್ಮ ವೈಯಕ್ತಿಕ ಅನುಭವವನ್ನು ನ್ಯಾಯಾಲಯದ ಮುಂದೆ ವಿವರಿಸಿದರು. ಖಾಸಗಿ ಪರಿಶೀಲನಾ ಪ್ರಕ್ರಿಯೆಯೊಂದರಲ್ಲಿ ಕೇವಲ PAN ಮತ್ತು UAN ವಿವರಗಳನ್ನು ನೀಡಿದಾಗ, ಆ ಸಂಖ್ಯೆಗಳೊಂದಿಗೆ ಸಂಪರ್ಕ ಹೊಂದಿದ್ದ ತಮ್ಮ ಸಂಪೂರ್ಣ ಉದ್ಯೋಗ ಇತಿಹಾಸ ಬಹಿರಂಗವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಕನಿಷ್ಠ OTP ಪಡೆಯುವುದು, ಸ್ಪಷ್ಟ ಒಪ್ಪಿಗೆ (Consent) ಪಡೆಯುವುದು ಅಥವಾ ಅಧಿಕೃತ ಗುರುತಿನ ಪರಿಶೀಲನೆಯಂತಹ ಮೂಲಭೂತ ಭದ್ರತಾ ಕ್ರಮಗಳೂ ಇರಲಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ ಇದು ಸರ್ಕಾರಿ ಸಂಸ್ಥೆಗಳಿಂದ ನಡೆದ ಡೇಟಾ ಸೋರಿಕೆ ಅಲ್ಲ. ಬದಲಾಗಿ, ಡೇಟಾ ಭದ್ರತೆಗೆ ಸೂಕ್ತ ರಕ್ಷಣಾ ವ್ಯವಸ್ಥೆಗಳ ಕೊರತೆಯೇ ಇದಕ್ಕೆ ಕಾರಣ ಎಂದು ಅರ್ಜಿದಾರರು ಹೇಳಿದ್ದಾರೆ.
ಪ್ರಸ್ತುತ ಖಾಸಗಿ ಸಂಸ್ಥೆಗಳು ಉದ್ಯೋಗ ಪರಿಶೀಲನೆ, ದ್ವಂದ್ವ ಉದ್ಯೋಗ (Moonlighting) ಸ್ಕ್ರೀನಿಂಗ್ ಹಾಗೂ ಕಾರ್ಮಿಕ ಮಾರುಕಟ್ಟೆ ಪ್ರೊಫೈಲಿಂಗ್‌ನಂತಹ ಉದ್ದೇಶಗಳಿಗೆ ಪಿಎಫ್ ಮತ್ತು ಆದಾಯ ತೆರಿಗೆ ದಾಖಲೆಗಳನ್ನು ಬಳಸುತ್ತಿವೆ ಎಂದು ಅರ್ಜಿದಾರರು ವಿವರಿಸಿದರು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಪೀಠವು, ಖಾಸಗಿ ಏಜೆನ್ಸಿಗಳ ಮೂಲಕ ವೈಯಕ್ತಿಕ ಡೇಟಾ ದುರ್ಬಳಕೆಯಾಗುವುದನ್ನು ತಡೆಯಲು ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

