HomeIndiaಆದೇಶ ಉಲ್ಲಂಘಿಸಿ ವಿದ್ಯಾರ್ಥಿಗೆ ನೋಟಿಸ್ ; ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ ಎಂದು ʼಸುಪ್ರೀಂʼ ಕೋರ್ಟ್ ಗರಂ...

ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗೆ ನೋಟಿಸ್ ; ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ ಎಂದು ʼಸುಪ್ರೀಂʼ ಕೋರ್ಟ್ ಗರಂ !

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ, ವಿದ್ಯಾರ್ಥಿಯೊಬ್ಬನಿಗೆ ನೋಟಿಸ್ ಜಾರಿ ಮಾಡಿದ ಗ್ರೇಟರ್ ನೋಯ್ಡಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

ಈ ಕುರಿತು ವಿಚಾರಣೆ ವೇಳೆ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ನ್ಯಾಯಾಲಯದ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ ಎಂದು ಕಿಡಿಕಾರಿದೆ.

ವಕೀಲರೊಬ್ಬರು ಪತ್ರಿಕಾ ವರದಿಯನ್ನು ಉಲ್ಲೇಖಿಸಿ ನ್ಯಾಯಪೀಠದ ಗಮನ ಸೆಳೆದಾಗ ಈ ವಿಷಯ ಮುನ್ನೆಲೆಗೆ ಬಂದಿತು. ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ಎಂಬುವವರಿಗೆ ಗ್ರೇಟರ್ ನೋಯ್ಡಾ ಆಡಳಿತವು ನೋಟಿಸ್ ಜಾರಿ ಮಾಡಿತ್ತು. ಸಾರ್ವಜನಿಕ ಶಾಂತಿ ಕದಡದಂತೆ ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಬಳಿಕ ಆ ನೋಟಿಸ್ ಅನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಚಾರವಾಗಿ ವಾದ ಮಂಡಿಸಿದ ವಕೀಲರು, ಇದು ದೇಶದ ಯುವ ಸಮುದಾಯ ಮತ್ತು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರವಾಗಿದ್ದು, ಇದು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಾಗಿದೆ. ನೋಟಿಸ್ ಅನ್ನು ಹಿಂಪಡೆದ ಮಾತ್ರಕ್ಕೆ ನ್ಯಾಯಾಂಗ ನಿಂದನೆಯ ಗಂಭೀರತೆ ಕಡಿಮೆಯಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ನ್ಯಾಯಾಲಯವು ಈ ಹಿಂದೆ ನೀಡಿದ್ದ ಸೆಪ್ಟೆಂಬರ್ ಒಂದರ ಆದೇಶವನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಪಡಿಸಿ, ಯಾವುದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಅತ್ಯಂತ ಸರಳ ಭಾಷೆಯಲ್ಲಿ ಸ್ಪಷ್ಟವಾಗಿ ಆದೇಶಿಸಲಾಗಿತ್ತು. ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತಹ ಆದೇಶವನ್ನು ಮ್ಯಾಜಿಸ್ಟ್ರೇಟ್ ಉಲ್ಲಂಘಿಸಲು ಸಾಧ್ಯವೇ ಇಲ್ಲ. ದೇಶದ ಯುವಜನರ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಅಲ್ಲದೆ, ಈ ಎಲ್ಲಾ ಅಂಶಗಳನ್ನು ಅಧಿಕೃತವಾಗಿ ದಾಖಲೆಯ ರೂಪದಲ್ಲಿ ಸಲ್ಲಿಸುವಂತೆ ವಕೀಲರಿಗೆ ಸೂಚಿಸಿದ ಪೀಠವು, ಈ ಕುರಿತು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ವಿವರಣೆ ಕೇಳಲಾಗುವುದು ಎಂದು ತಿಳಿಸಿತು.

ಇತ್ತ ವಿದ್ಯಾರ್ಥಿ ಅಕ್ಷತ್ ತ್ರಿಪಾಠಿ ತಮ್ಮ ಮೇಲಿನ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ರಜೆ ಹಾಗೂ ಆನ್‌ಲೈನ್ ತರಗತಿಗಳ ಕಾರಣದಿಂದ ಕಳೆದ ಮೂರು ತಿಂಗಳಿಂದ ವಿಶ್ವವಿದ್ಯಾಲಯಕ್ಕೇ ಹೋಗಿಲ್ಲ ಮತ್ತು ಜುಲೈನಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ನೋಟಿಸ್ ಪ್ರಶ್ನಿಸಿ ವಿದ್ಯಾರ್ಥಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಉನ್ನತ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡ ಅಧಿಕಾರಿಗಳ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular