ನವದೆಹಲಿ: ಅರವಳ್ಳಿ ಪರ್ವತ ಶ್ರೇಣಿಯ ವ್ಯಾಖ್ಯಾನ ಮತ್ತು ಗಡಿ ನಿರ್ಧಾರ ಕುರಿತಂತೆ ಪರಿಶೀಲನೆ ನಡೆಸುತ್ತಿರುವ ಉನ್ನತಾಧಿಕಾರ ಸಮಿತಿಗೆ (HPC) ಹೆಚ್ಚುವರಿ ಆರು ತಿಂಗಳ ಕಾಲಾವಕಾಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಮಿತಿಯು ತನ್ನ ಅಂತಿಮ ವರದಿಯನ್ನು 2026ರ ನವೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಗಡುವು ವಿಧಿಸಿದೆ.
ಆಗಸ್ಟ್ 31ರಂದು ವರದಿ ಸಲ್ಲಿಸಬೇಕಿದ್ದ ಸಮಿತಿಯು, ಸಮಗ್ರ ಹಾಗೂ ವೈಜ್ಞಾನಿಕವಾಗಿ ಸಮರ್ಥಿಸಬಹುದಾದ ಪರಿಶೀಲನೆ ನಡೆಸಲು ಹೆಚ್ಚಿನ ಸಮಯ ಅಗತ್ಯವಿದೆ ಎಂದು ತಿಳಿಸಿ, 2027ರ ಫೆಬ್ರವರಿ 28ರವರೆಗೆ ಗಡುವು ವಿಸ್ತರಿಸುವಂತೆ ಮನವಿ ಮಾಡಿತ್ತು. ಆದರೆ ಸೋಮವಾರ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಮಿತಿಯು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲು ವಿಫಲವಾದರೆ, ಇಡೀ ಸಮಿತಿಯನ್ನೇ ಪುನರ್‌ರಚಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.
“ಅರವಳ್ಳಿ ವಿಚಾರದ ವರದಿ ಸಲ್ಲಿಸಲು ಸಮಿತಿಯವರು ಹಗಲು-ರಾತ್ರಿ ಕೆಲಸ ಮಾಡಲಿ. ಎರಡು ತಿಂಗಳಲ್ಲೂ ವರದಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಇಡೀ ಸಮಿತಿಯನ್ನೇ ಪುನರ್‌ರಚಿಸುತ್ತೇವೆ,” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಹೇಳಿದ್ದಾರೆ.
ಗಡುವಿನ ಬಗ್ಗೆ ಪರಿಸರವಾದಿಗಳ ಅಸಮಾಧಾನ
ಸುಪ್ರೀಂ ಕೋರ್ಟ್‌ನ ಈ ನಿರ್ಧಾರಕ್ಕೆ ಪರಿಸರವಾದಿಗಳು ಹಾಗೂ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಪರಿಸರ ವ್ಯವಸ್ಥೆಯಾಗಿರುವ ಅರವಳ್ಳಿ ಪರ್ವತ ಶ್ರೇಣಿಯ ವೈಜ್ಞಾನಿಕ ಮೌಲ್ಯಮಾಪನವನ್ನು ಅವಸರದಲ್ಲಿ ನಡೆಸಬಾರದು ಎಂದು ಅವರು ಹೇಳಿದ್ದಾರೆ.
ಅರವಳ್ಳಿ ವಿರಾಸತ್ ಜನ ಅಭಿಯಾನದ ಸಹ-ಸಂಸ್ಥಾಪಕ ದಿವಾನ್ ಸಿಂಗ್ ಅವರು ನ್ಯಾಯಾಲಯದ ನಿರ್ಧಾರವನ್ನು “ತುಂಬಾ ಆತಂಕಕಾರಿ” ಎಂದು ಹೇಳಿದ್ದಾರೆ. ಇಂತಹ ಮಹತ್ವದ ವೈಜ್ಞಾನಿಕ ಅಧ್ಯಯನಕ್ಕೆ ಸಾಕಷ್ಟು ಸಮಯ ಮತ್ತು ವೈಜ್ಞಾನಿಕ ನಿಖರತೆ ಅಗತ್ಯವಿದೆ. ಸಮಿತಿಯನ್ನು “ಶಾಲಾ ವಿದ್ಯಾರ್ಥಿಗಳಂತೆ” ಪರಿಗಣಿಸಿ ಹಗಲು-ರಾತ್ರಿ ಕೆಲಸ ಮಾಡುವಂತೆ ನಿರೀಕ್ಷಿಸುವುದು ಸರಿಯಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ತನ್ನ ಅಧ್ಯಯನ ಪೂರ್ಣಗೊಳಿಸಲು ಒಂದು ವರ್ಷ ತೆಗೆದುಕೊಂಡಿತ್ತು. ನಂತರ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಿತ್ತು ಎಂದು ಸಿಂಗ್ ಉಲ್ಲೇಖಿಸಿದ್ದಾರೆ.
“ಇಂತಹ ಎಲ್ಲ ಅಧ್ಯಯನಗಳಿಗೂ ಸಮಯ ಬೇಕಾಗುತ್ತದೆ. ಅವುಗಳನ್ನು ಯಾವುದೇ ಕಾರಣಕ್ಕೂ ಅವಸರದಲ್ಲಿ ನಡೆಸಬಾರದು. ಅರವಳ್ಳಿಗೂ ಅದಕ್ಕಿಂತ ಕಡಿಮೆ ವೈಜ್ಞಾನಿಕ ಪರಿಶೀಲನೆ ಸಲ್ಲದು,” ಎಂದು ಅವರು ಹೇಳಿದ್ದಾರೆ.
ಹಲವು ಆಯಾಮಗಳ ಅಧ್ಯಯನ ಅಗತ್ಯ
ತನ್ನ ಅನುಸರಣೆ ವರದಿಯಲ್ಲಿ HPC, ಅರವಳ್ಳಿ ಪ್ರದೇಶದ ವಿಶಾಲ ಭೂವೈಜ್ಞಾನಿಕ, ಭೂರೂಪಶಾಸ್ತ್ರೀಯ, ಜಲವೈಜ್ಞಾನಿಕ, ಜೈವ-ಭೌಗೋಳಿಕ, ಪರಿಸರ, ಜೀವವೈವಿಧ್ಯ, ಖನಿಜ ಸಂಪನ್ಮೂಲ ಹಾಗೂ ಸಾಮಾಜಿಕ-ಆರ್ಥಿಕ ಆಯಾಮಗಳನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದೆ.
ಸಮಿತಿಯು ‘ಅರವಳ್ಳಿ ಇಕೋಸಿಸ್ಟಮ್ ಲ್ಯಾಂಡ್‌ಸ್ಕೇಪ್’ (AEL) ಎಂಬ ಚೌಕಟ್ಟನ್ನೂ ಪ್ರಸ್ತಾಪಿಸಿದೆ. ವಿವಿಧ ಸಾಮಾಜಿಕ-ಪರಿಸರ ಗುಣಲಕ್ಷಣಗಳನ್ನು ಹೊಂದಿರುವ ಪ್ರದೇಶಗಳನ್ನು ಗುರುತಿಸಿ, ಅವುಗಳಿಗೆ ಪ್ರತ್ಯೇಕ ಸಂರಕ್ಷಣೆ ಮತ್ತು ನಿರ್ವಹಣಾ ಕ್ರಮಗಳನ್ನು ರೂಪಿಸಲು ಇದು ನೆರವಾಗಲಿದೆ ಎಂದು ಸಮಿತಿ ಹೇಳಿದೆ.
ಅರವಳ್ಳಿಯ ಎಲ್ಲಾ 64 ಜಿಲ್ಲೆಗಳ ಅಧ್ಯಯನಕ್ಕೆ ಒತ್ತಾಯ
ಸಂರಕ್ಷಣಾವಾದಿ ನೀಲಂ ಅಹ್ಲುವಾಲಿಯಾ ಅವರು ಅರವಳ್ಳಿ ಪರ್ವತ ಶ್ರೇಣಿಗೆ ಸಂಬಂಧಿಸಿದ ಎಲ್ಲಾ 64 ಜಿಲ್ಲೆಗಳನ್ನೂ ಸಮಿತಿಯ ಅಧ್ಯಯನದ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
2025ರ ಸೆಪ್ಟೆಂಬರ್ 22ರಂದು ಪ್ರಕಟವಾದ ಭಾರತೀಯ ಅರಣ್ಯ ಸಮೀಕ್ಷೆ (FSI) ವರದಿಯಲ್ಲಿ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ 63 ಜಿಲ್ಲೆಗಳ ಉಲ್ಲೇಖವಿದೆ. ಇದರ ಜೊತೆಗೆ ಮಥುರಾವನ್ನೂ ಸೇರಿಸಿ ಒಟ್ಟು 64 ಜಿಲ್ಲೆಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರ ಪರಿಸರ ಸಚಿವಾಲಯ ನೇತೃತ್ವದ ಸಮಿತಿಯ ವರದಿಯಲ್ಲಿ ಕೇವಲ 37 ಅರವಳ್ಳಿ ಜಿಲ್ಲೆಗಳನ್ನು ಗುರುತಿಸಲಾಗಿದೆ. ರಾಜಸ್ಥಾನದ ಚಿತ್ತೋರ್ಗಢ, ಸವಾಯಿ ಮಾಧೋಪುರ, ಭರತ್‌ಪುರ ಮತ್ತು ಬುಂದಿ ಸೇರಿದಂತೆ ಕೆಲವು ಪ್ರಮುಖ ಜಿಲ್ಲೆಗಳನ್ನು ಕೈಬಿಡಲಾಗಿದೆ ಎಂಬ ಆರೋಪವೂ ಇದೆ ಎಂದು ಅಹ್ಲುವಾಲಿಯಾ ಹೇಳಿದ್ದಾರೆ.
ಭಿಲ್ ಆದಿವಾಸಿ ನಾಯಕಿ ಸಾಧನಾ ಮೀನಾ ಕೂಡ ಗ್ರಾಮೀಣ ಸಮುದಾಯಗಳೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅರವಳ್ಳಿ ಭೂಪ್ರದೇಶದ ಪ್ರಮುಖ ಪಾಲುದಾರರಾಗಿರುವ ಸ್ಥಳೀಯರನ್ನು ಅಧ್ಯಯನ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಎಲ್ಲಾ 64 ಜಿಲ್ಲೆಗಳಲ್ಲಿ ಉಪವಿಭಾಗ ಅಥವಾ ಕನಿಷ್ಠ ಜಿಲ್ಲಾಮಟ್ಟದಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಇದಕ್ಕಾಗಿ ಸ್ಥಳೀಯರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅರವಳ್ಳಿ ವ್ಯಾಖ್ಯಾನ ವಿವಾದ ಹೇಗೆ ಆರಂಭವಾಯಿತು?
ಅರವಳ್ಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪ್ರಸ್ತುತ ಪ್ರಕ್ರಿಯೆಯು 2025ರ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ ಗಣಿಗಾರಿಕೆ ಸಂಬಂಧಿತ ತೀರ್ಪಿನಿಂದ ಆರಂಭವಾಯಿತು.
ಅಂದಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ಗಣಿಗಾರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಅರವಳ್ಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಯನ್ನು ಗುರುತಿಸಲು ತಜ್ಞರ ಸಮಿತಿ ಪ್ರಸ್ತಾಪಿಸಿದ್ದ ಎತ್ತರ ಆಧಾರಿತ ಮಾನದಂಡವನ್ನು ಅಂಗೀಕರಿಸಿತ್ತು.
ಈ ಮಾನದಂಡದ ಪ್ರಕಾರ, ಅರವಳ್ಳಿ ಜಿಲ್ಲೆಯಲ್ಲಿ ಸುತ್ತಮುತ್ತಲಿನ ಸ್ಥಳೀಯ ಭೂಪ್ರದೇಶಕ್ಕಿಂತ ಕನಿಷ್ಠ 100 ಮೀಟರ್ ಎತ್ತರ ಹೊಂದಿರುವ ಭೂರೂಪವನ್ನು ‘ಅರವಳ್ಳಿ ಬೆಟ್ಟ’ ಎಂದು ಪರಿಗಣಿಸಲಾಗುತ್ತದೆ. ಪರಸ್ಪರ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಎರಡು ಅಥವಾ ಅದಕ್ಕಿಂತ ಹೆಚ್ಚು ಇಂತಹ ಬೆಟ್ಟಗಳನ್ನು ‘ಅರವಳ್ಳಿ ಪರ್ವತ ಶ್ರೇಣಿ’ಯ ಭಾಗವೆಂದು ಪರಿಗಣಿಸಲಾಗುತ್ತದೆ.
ಕೋರ್ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ನಿರ್ಬಂಧಗಳನ್ನು ನ್ಯಾಯಾಲಯ ಬೆಂಬಲಿಸಿತ್ತು. ಆದರೆ ಸಂಪೂರ್ಣ ಗಣಿಗಾರಿಕೆ ನಿಷೇಧ ಹೇರಲಿಲ್ಲ. ಸಂಪೂರ್ಣ ನಿಷೇಧವು ಅಕ್ರಮ ಗಣಿಗಾರಿಕೆಗೆ ಉತ್ತೇಜನ ನೀಡಬಹುದು ಎಂಬ ಕಾರಣವನ್ನು ನ್ಯಾಯಾಲಯ ನೀಡಿತ್ತು.
ಆದರೆ ಈ ಹೊಸ ವ್ಯಾಖ್ಯಾನಕ್ಕೆ ಪರಿಸರವಾದಿಗಳು ಹಾಗೂ ಇತರ ಹಿತಾಸಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇವಲ ಎತ್ತರವನ್ನು ಆಧಾರವಾಗಿಟ್ಟುಕೊಂಡ ಮಾನದಂಡದಿಂದ ಅರವಳ್ಳಿಯ ಬಹುಪಾಲು ಪ್ರದೇಶ ಕಾನೂನು ರಕ್ಷಣೆಯಿಂದ ಹೊರಗುಳಿದು ಗಣಿಗಾರಿಕೆಗೆ ಮುಕ್ತವಾಗುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಮಾನದಂಡದಿಂದ ಅರವಳ್ಳಿ ಪ್ರದೇಶದ ಶೇ.90ಕ್ಕೂ ಹೆಚ್ಚು ಭಾಗವು ಪರಿಣಾಮಕಾರಿಯಾಗಿ ಅಸ್ತಿತ್ವದಲ್ಲಿರುವ ಪರಿಸರ ಸಂರಕ್ಷಣಾ ನಿಯಮಗಳ ವ್ಯಾಪ್ತಿಯಿಂದ ಹೊರಗುಳಿಯಬಹುದು ಎಂಬ ಆತಂಕವೂ ವ್ಯಕ್ತವಾಗಿತ್ತು.
ಈ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮರುಪರಿಶೀಲಿಸಿತು. 2025ರ ಡಿಸೆಂಬರ್ 29ರಂದು CJI ಸೂರ್ಯಕಾಂತ್ ನೇತೃತ್ವದ ಪೀಠವು ನವೆಂಬರ್ 20ರ ತೀರ್ಪನ್ನು ತಡೆಹಿಡಿದು, ಹಿಂದಿನ ತಜ್ಞರ ಸಮಿತಿಯ ಶಿಫಾರಸುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಿತು.
ಇದೀಗ ಮೇ 25ರಂದು ರಚಿಸಲಾದ ಅರವಳ್ಳಿ ಉನ್ನತಾಧಿಕಾರ ಸಮಿತಿ (HPC), ಅರವಳ್ಳಿ ಪರ್ವತ ಶ್ರೇಣಿಯ ವ್ಯಾಖ್ಯಾನ ಮತ್ತು ಗಡಿ ನಿರ್ಧಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸುತ್ತಿದೆ.

