ಬೆಂಗಳೂರು: ಸಿಲಿಕಾನ್ ಸಿಟಿಯ ಆಕಾಶದಲ್ಲಿ ಶುಕ್ರವಾರ ಮಧ್ಯಾಹ್ನ ಅಪರೂಪದ ನೈಸರ್ಗಿಕ ದೃಶ್ಯವೊಂದು ಕಂಡುಬಂದಿದ್ದು, ಜನರ ಗಮನ ಸೆಳೆಯಿತು. ಸೂರ್ಯನ ಸುತ್ತಲೂ ದೊಡ್ಡದಾದ ವೃತ್ತಾಕಾರದ ಬೆಳಕಿನ ವಲಯ ಮೂಡಿದ್ದು, ಇದನ್ನು ಕಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ದೃಶ್ಯವನ್ನು ಸೆರೆಹಿಡಿದರು.
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಈ ವಿದ್ಯಮಾನ ಗೋಚರಿಸಿದೆ. ಸೂರ್ಯನ ಸುತ್ತ ಮೂಡಿದ್ದ ಪ್ರಭಾವಳಿ ದೂರದಿಂದ ನೋಡಿದಾಗ ಬೆಳಕಿನ ಉಂಗುರದಂತೆ ಕಾಣುತ್ತಿತ್ತು. ಇದರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ.
ಏನಿದು ‘22 ಡಿಗ್ರಿ ಹ್ಯಾಲೋ’?
ಹವಾಮಾನ ತಜ್ಞರ ಪ್ರಕಾರ, ಇದನ್ನು ‘ಸನ್ ಹ್ಯಾಲೋ’ ಅಥವಾ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ. ಇದು ಯಾವುದೇ ಅಸಹಜ ಘಟನೆ ಅಲ್ಲ. ವಾತಾವರಣದಲ್ಲಿ ನಡೆಯುವ ಸಹಜ ಪ್ರಕ್ರಿಯೆಯಿಂದ ಈ ಸುಂದರ ದೃಶ್ಯ ಕಾಣಿಸಿಕೊಳ್ಳುತ್ತದೆ.
ಭೂಮಿಯಿಂದ ಸುಮಾರು 5ರಿಂದ 10 ಕಿಲೋಮೀಟರ್ ಎತ್ತರದಲ್ಲಿರುವ ತೆಳುವಾದ ಸಿರಸ್ ಮೋಡಗಳಲ್ಲಿ ಸಣ್ಣ ಹಿಮದ ಹರಳುಗಳು ಇರುತ್ತವೆ. ಸೂರ್ಯನ ಬೆಳಕು ಈ ಹಿಮದ ಹರಳುಗಳ ಮೂಲಕ ಹಾದುಹೋಗುವಾಗ ಬೆಳಕಿನ ದಿಕ್ಕಿನಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಪ್ರಕ್ರಿಯೆಯಿಂದ ಸೂರ್ಯನ ಸುತ್ತಲೂ ವೃತ್ತಾಕಾರದ ಪ್ರಭಾವಳಿ ಕಾಣಿಸಿಕೊಳ್ಳುತ್ತದೆ.
ಈ ಹಿಮದ ಹರಳುಗಳ ಆಕಾರ ಮತ್ತು ಬೆಳಕಿನ ವಕ್ರೀಭವನದಿಂದ ಸೂರ್ಯನಿಂದ ಸುಮಾರು 22 ಡಿಗ್ರಿ ಅಂತರದಲ್ಲಿ ಈ ಉಂಗುರ ಸಾಮಾನ್ಯವಾಗಿ ಗೋಚರಿಸುತ್ತದೆ. ಹೀಗಾಗಿ ಇದಕ್ಕೆ ‘22 ಡಿಗ್ರಿ ಹ್ಯಾಲೋ’ ಎಂಬ ಹೆಸರು ಬಂದಿದೆ.
ಅಪಶಕುನವಲ್ಲ, ಪ್ರಕೃತಿಯ ಅಚ್ಚರಿ
ಇಂತಹ ದೃಶ್ಯಗಳು ಕಾಣಿಸಿಕೊಂಡಾಗ ಕೆಲವೊಮ್ಮೆ ಹಲವು ರೀತಿಯ ನಂಬಿಕೆಗಳು ಹರಡುವುದುಂಟು. ಆದರೆ ‘ಸನ್ ಹ್ಯಾಲೋ’ಗೂ ಯಾವುದೇ ಅಪಶಕುನಕ್ಕೂ ಸಂಬಂಧವಿಲ್ಲ. ಇದು ವಾತಾವರಣದಲ್ಲಿರುವ ಹಿಮದ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವುದರಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನ.
ಬೆಂಗಳೂರಿನ ಆಕಾಶದಲ್ಲಿ ಮೂಡಿದ ಈ ಅಪರೂಪದ ಬೆಳಕಿನ ಉಂಗುರ ಕೆಲಕಾಲ ಜನರ ಕುತೂಹಲಕ್ಕೆ ಕಾರಣವಾಗಿದ್ದು, ನಗರದ ಹಲವೆಡೆ ಇದನ್ನು ಕಂಡವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

