ಬೆಂಗಳೂರು: ಜನಸಾಮಾನ್ಯರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ತಕ್ಷಣ ಮೊಬೈಲ್ ಗೆ ಇ-ಚಲನ್ ಸಂದೇಶ ಬರುತ್ತದೆ. ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತ್ತಾರೆ. ಆದರೆ ಸರ್ಕಾರಿ ವಾಹನಗಳು, ಅದರಲ್ಲಿಯೂ ಪೊಲೀಸ್ ವಾಹನಗಳೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಮೂಲಕ ಬೇಲಿಯೇ ಎದ್ದು ಹೊಲ ಮೆಯ್ಡಂತಾಗಿದೆ.
ಕಾನೂನು ಸುವ್ಯವಸ್ಥೆ ಕಾಯಬೇಕಾದ ಸರ್ಕಾರಿ ಹಾಗೂ ಪೊಲೀಸ್ ವಾಹನಗಳೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದು, ಈ ಬಗ್ಗೆ ಗೃಹ ಇಲಾಖೆಯೇ ಅಧಿಕ್ರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸರ್ಕಾಅರಿ ವಾಹನ ಹಾಗೂ ಪೊಲೀಸ್ ವಾಹನಗಳ ಈ ನಡೆಯನ್ನು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
ಸಂಚಾರ ನಿಯಮಗಳ ಬಗ್ಗೆ ಜನರಿಗೆ ತಿಳುವಳಿಕೆ ಹೇಳಬೇಕಾದ ಪೊಲೀಸ್ ಇಲಾಖೆಯ ವಾಹನಗಳೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧ ಬರೋಬ್ಬರಿ 3,366 ಪ್ರಕರಣಗಳು ದಾಖಲಾಗಿವೆ.
2023ರಲ್ಲಿ ಕೇವಲ 21 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1,494ಕ್ಕೆ ಏರಿಕೆಯಾಗಿತ್ತು. 2025ರಲ್ಲಿ 1,251 ಮತ್ತು 2026ರ ಜುಲೈ ಅಂತ್ಯದ ವೇಳೆಗೆ ಮತ್ತೆ 600 ಪ್ರಕರಣಗಳು ದಾಖಲಾಗಿವೆ.
ಇನ್ನು ಸರ್ಕಾರಿ ಕಚೇರಿಗಳ ವಾಹನಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಸರ್ಕಾರಿ ಇಲಾಖೆಯ ವಾಹನಗಳ ಮೇಲೆ ಬರೋಬ್ಬರಿ 82,478 ಕೇಸ್‌ಗಳು ದಾಖಲಾಗಿವೆ. 2023ರಲ್ಲಿ 1,055 ಕೇಸ್‌ಗಳಿದ್ದರೆ, 2024ರಲ್ಲಿ ಅತಿ ಹೆಚ್ಚು ಅಂದರೆ 35,832 ಹಾಗೂ 2025ರಲ್ಲಿ ದಾಖಲೆಯ 38,282 ಪ್ರಕರಣಗಳು ದಾಖಲಾಗಿವೆ.
ಪ್ರಸಕ್ತ 2026ರ ಜುಲೈವರೆಗೆ 7,309 ಕೇಸ್‌ಗಳು ದಾಖಲಾಗಿವೆ. ಒಟ್ಟಾರೆಯಾಗಿ ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳೆರಡೂ ಸೇರಿ ಬರೋಬ್ಬರಿ 85,844 ಬಾರಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಜನ ಸಾಮಾನ್ಯರ ವಾಹನ ಸವಾರರು ದಂಡ ಕಟ್ಟದಿದ್ದರೆ ವಾಹನ ತಡೆಯುವ ಅಥವಾ ಜಪ್ತಿ ಮಾಡುವ ವ್ಯವಸ್ಥೆ ಇದೆ. ಆದರೆ ಸರ್ಕಾರಿ ಮತ್ತು ಪೊಲೀಸ್ ವಾಹನಗಳಿಂದ ಯಾವುದೇ ದಂಡ ವಸೂಲಿ ಕ್ರಮ ವ್ಯವಸ್ಥಿತವಾಗಿ ಜಾರಿಗೆ ಬಂದಿಲ್ಲ. 85,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬರೋಬ್ಬರಿ 19.23 ಕೋಟಿ ರೂ ದಂಡ ಬಾಕಿಯಿದೆ.
2023: ವಿಧಿಸಲಾದ ದಂಡ 5,41,500 ರೂ, ವಸೂಲಾಗಿದ್ದು 1,19,000; ಬಾಕಿ ಉಳಿದದ್ದು 4,22,500 ರೂ.
2024: ಅತಿ ಹೆಚ್ಚು ಅಂದರೆ 17,48,60,700 ರೂ ದಂಡ ವಿಧಿಸಲಾಗಿದ್ದು, ವಸೂಲಾಗಿದ್ದು ಕೇವಲ 35,27,700 ರೂ ಬರೋಬ್ಬರಿ 17,13,33,000 ರೂ ಬಾಕಿ ಉಳಿದಿದೆ.
2025: 2,09,19,000 ರೂ ದಂಡದಲ್ಲಿ 6,61,250 ರೂ, ಮಾತ್ರ ಸಂಗ್ರಹವಾಗಿದ್ದು, 2,02,56,500 ರೂ. ಬಾಕಿಯಾಗಿದೆ.
2026 (ಜುಲೈವರೆಗೆ): 40,10,000 ರೂ ದಂಡದಲ್ಲಿ 4,64,750 ರೂ ಮಾತ್ರ ಜಮೆಯಾಗಿದ್ದು, 36,05,000 ರೂ ಬಾಕಿ ಇದೆ.
ಸರ್ಕಾರಿ ಹಾಗೂ ಪೊಲೀಸ್ ವಾಹನಗಳಿಂದ ಸರ್ಕಾರಕ್ಕೆ ಬರಬೇಕಾದ ದಂಡದ ಮೊತ್ತ ಬರೋಬ್ಬರಿ 19.23 ಕೋಟಿ ರೂ ಬಾಕಿ ಇದೆ ಎಂದು ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

