ಶಿವಮೊಗ್ಗ: ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬರು ತಂದೆಯ ಸಾವಿನ ನೋವಿನಲ್ಲಿಯೂ ಪರೀಕ್ಷೆ ಬರೆದಿದ್ದಾರೆ. ಶಿವಮೊಗ್ಗ ತಾಲೂಕಿನ ಹಸೂಡಿ ಫಾರಂ ನಿವಾಸಿ ಕೂಲಿ ಕಾರ್ಮಿಕ ತಂಗರಾಜ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆಯ ಸಾವಿನ ದುಃಖದ ನಡುವೆ ಅವರ ಪುತ್ರಿ ಶೆಟ್ಟಿಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಎಸ್ಎಸ್ಎಲ್ಸಿ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ಮನೆಯಲ್ಲಿ ತಂದೆಯ ಶವ ಇದ್ದು ಪರೀಕ್ಷೆ ಬರೆಯಲು ಹೋಗಬೇಕೆ, ಬೇಡವೇ ಎನ್ನುವ ಗೊಂದಲದಲ್ಲಿದ್ದ ಶರಣ್ಯಾ ಅವರಿಗೆ ಶಿಕ್ಷಕರು ಮತ್ತು ಗ್ರಾಮಸ್ಥರು ಧೈರ್ಯ ತುಂಬಿದ್ದಾರೆ. ಪರೀಕ್ಷೆ ಬರೆದು ಬರುವಂತೆ ತಿಳಿಸಿದ್ದಾರೆ.
ನಂತರ ಶೆಟ್ಟಿಹಳ್ಳಿಗೆ ತೆರಳಿ ಪರೀಕ್ಷೆ ಬರೆದ ಶರಣ್ಯಾ ಪರೀಕ್ಷಾ ಕೇಂದ್ರದಿಂದ ಆಗಮಿಸಿ ಸಂಜೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಕೂಲಿ ಕಾರ್ಮಿಕ ತಂಗರಾಜ್ ಸಾವಿನಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

