ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಮೊಬೈಲ್, ಬೈಕ್ ಕಸಿದು ಪರಾರಿಯಾಗಿದ್ದ ಇಬ್ಬರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರದ ಬಂಜಾರ ಲೇಔಟ್ ನಿವಾಸಿ ಧೀರಜ್(21) ಗಾಯಕೊಂಡ ವಿದ್ಯಾರ್ಥಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .ಆರ್.ಎಸ್. ಪಾಳ್ಯದ ಸಮೀಪ ಜಾನಕಿರಾಮ ಲೇಔಟ್ ನ ಭುವನ್, ಮಿಥುನ್ ಬಂಧಿತ ಆರೋಪಿಗಳು.
ಭಾನುವಾರ ಬೆಳಗಿನ ಜಾವ ಧೀರಜ್ ಸ್ನೇಹಿತರೊಂದಿಗೆ ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೊರಟಿದ್ದರು. ರಾಮಮೂರ್ತಿ ನಗರ ಸರ್ಕಲ್ ಸಮೀಪ ಹೊರ ವರ್ತುಲ ರಸ್ತೆಯಲ್ಲಿ ಸ್ನೇಹಿತರಿಗಾಗಿ ಕಾಯುತ್ತಿದ್ದರು. ಇದೇ ವೇಳೆ ಬೈಕ್ ನಲ್ಲಿ ಬಂದ ಆರೋಪಿಗಳು ನಿನ್ನ ಬೈಕ್ ಟಚ್ ಆಗಿದೆ ಎಂದು ಜಗಳವಾಡಿದ್ದಾರೆ. ಧೀರಜ್ ಗೆ ಮೊಬೈಲ್ ಕೊಡುವಂತೆ ಕೇಳಿದ್ದಾರೆ. ನಿರಾಕರಿಸಿದಾಗ ಚಾಕುವಿನಿಂದ ಇರಿದಿದ್ದಾರೆ. ತೊಡೆ ಮತ್ತು ಬೆನ್ನಿಗೆ ಚಾಕುವಿನಿಂದ ಇರಿದು ಬೈಕ್ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಧೀರಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

